ಮುಂಬಯಿ: ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಇಂದು(ಮಂಗಳವಾರ) ನಡೆಯುವ ತವರಿನ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಆದರೆ ತಂಡದ ವೇಗಿ ಜೋಫ್ರಾ ಆರ್ಚರ್ ಅವರು ತವರಿಗೆ ಮರಳಿದ್ದಾರೆ. ಆರ್ಚರ್ ಬದಲು ತಂಡಕ್ಕೆ ಕ್ರಿಸ್ ಜೋರ್ಡನ್ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಮುಂಬೈ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
“ಜೋಫ್ರಾ ಆರ್ಚರ್ ಅವರ ಚೇತರಿಕೆ ಮತ್ತು ಫಿಟ್‌ನೆಸ್ ಮೇಲೆ ನಿಗಾ ಇರಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆರ್ಚರ್ ಅವರನ್ನು ಪುನರ್ವಸತಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದೆ. ಈ ಕಾರಣದಿಂದ ಆರ್ಚರ್ ಅವರು ಐಪಿಎಲ್ ಟೂರ್ನಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಮತ್ತೊಬ್ಬ ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡನ್ ಅವರು ಮುಂಬೈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ” ಎಂದು ಮುಂಬೈ ಇಂಡಿಯನ್ಸ್ ತಿಳಿಸಿದೆ. ಜೋರ್ಡನ್ ಅವರನ್ನು 2 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
2022ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಆರ್ಚರ್ ಅವರನ್ನು ಬರೋಬ್ಬರಿ 8 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಅವರು ಫಿಟ್‌ನೆಸ್ ಸಮಸ್ಯೆಯಿಂದಾಗಿ ಕಳೆದ ವರ್ಷದ ಐಪಿಎಲ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಈ ಬಾರಿಯ ಆವೃತ್ತಿಯಲ್ಲಿ ಅವರು ಆಡಿದರೂ ತಂಡಕ್ಕೆ ಯಾವುದೇ ದೊಡ್ಡ ಉಪಯೋಗವಾಗಿಲ್ಲ. ದುವಾರಿಯಾಗುವ ಜತೆಗೆ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವು ಕಂಡುಬಂದಿತ್ತು.
ಇದನ್ನೂ ಓದಿ IPL 2023: ಮುಂಬೈ-ಆರ್ಸಿಬಿ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳ ಮಾಹಿತಿ
ಇದೇ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಮತ್ತು ಇದಕ್ಕೂ ಮುನ್ನ ಆಸೀಸ್ ವಿರುದ್ಧ ನಡೆಯುವ ಆ್ಯಶಸ್ ಸರಣಿಯನ್ನು ಮುಂದಿಟ್ಟುಕೊಂಡು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜೋಫ್ರಾ ಅವರನ್ನು ತವರಿಗೆ ಮರಳುವಂತೆ ಸೂಚಿಸಿದೆ. ಅದರಂತೆ ಜೋಫ್ರ ಅವರ ಫಿಟ್‌ನೆಸ್ ಮೇಲೆ ತೀವ್ರ ನಿಗಾ ಇರಿಸಿದೆ. 2019ರಲ್ಲಿ ಇಂಗ್ಲೆಂಡ್ ತಂಡ ಏಕದಿನ ವಿಶ್ವ ಕಪ್ ಗೆಲ್ಲುವಲ್ಲಿ ಆರ್ಚರ್ ಅವರ ಕೊಡುಗೆ ಅಪಾರವಾಗಿತ್ತು. ಇದೀಗ ಈ ಬಾರಿಯ ವಿಶ್ವಕಪ್ನಲ್ಲಿಯೂ ಅವರು ತಂಡದ ಪರ ಆಡುವ ನಿಟ್ಟಿನಲ್ಲಿ ಇಸಿಬಿ ಈ ಕ್ರಮ ಕೈಗೊಂಡಿದೆ.
2016 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಜೋರ್ಡಾನ್ ಇದುವರೆಗೆ 28 ಐಪಿಎಲ್ ಪಂದ್ಯಗಳನ್ನು ಆಡಿ 27 ವಿಕೆಟ್ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಪರ 87 ಟಿ20 ಪಂದ್ಯಗಳನ್ನು ಆಡಿ 96 ವಿಕೆಟ್ಗಳನ್ನು ಕಲೆಹಾಕಿದ್ದಾರೆ.