ಬೆಂಗಳೂರು: ಅತ್ಯಂತ ರೋಚಕವಾಗಿ ನಡೆದ ಐಪಿಎಲ್ನ 15ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡದ ವಿರುದ್ಧ ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ವಿಕೆಟ್ ಸೋಲು ಕಂಡಿದೆ. ಬೃಹತ್ ಮೊತ್ತದ ಈ ಪಂದ್ಯದಲ್ಲಿ ಅಂತಿಮ ಕ್ಷಣದ ತನಕವೂ ಗೆಲುವಿಗಾಗಿ ಉಭಯ ತಂಡಗಳು ಹೋರಾಟ ನಡೆಸಿದವು. ಆದರೆ ಅಂತಿಮವಾಗಿ ಲಕ್ ಲಕ್ನೋದ ಕಡೆ ವಾಲಿತು. ಒಂದು ವಿಕೆಟ್ ಅಂತದಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು. ಆವೇಶದಿಂದಲೇ ಗೆಲುವನ್ನು ಸಂಭ್ರಮಿಸಿದ ಆವೇಖ್ ಖಾನ್ ಮತ್ತು ನಿದಿತ ಸಮಯದಲ್ಲಿ ಓವರ್ ಮುಗಿಸದ ಫಾಫ್ ಡು ಪ್ಲೆಸಿಸ್ಗೆ ಐಪಿಎಲ್ ಮಂಡಳಿ ಭಾರಿ ದಂಡ ವಿಧಿಸಿದೆ.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನ ಪಡೆದ ಆರ್ಸಿಬಿ ವಿರಾಟ್ ಕೊಹ್ಲಿ, ಡು ಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಲಕ್ನೊ ಸೂಪರ್ ಜೈಂಟ್ಸ್ ತಂಡ ಕೊನೇ ಎಸೆತದಲ್ಲಿ ಬೈಸ್ ಮೂಲಕ ಒಂದು ರನ್ ಗಳಿಸಿ 213 ರನ್ ಬಾರಿಸಿ ಗೆಲುವು ಸಾಧಿಸಿತು.
ಇದನ್ನೂ ಓದಿ IPL 2023: ಸ್ಟೋಯಿನಿಸ್, ಪೂರನ್ ಬ್ಯಾಟಿಂಗ್ ಆರ್ಭಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಾಯಕ ರಾಹುಲ್
ಇದೇ ಗೆಲುವಿನ ಸಂಭ್ರಮಾಚರಣೆಯಲ್ಲಿ ಅವೇಶ್ ಖಾನ್ ತಮ್ಮ ಹೆಲ್ಮೆಟ್ ಮೈದಾನದಲ್ಲಿ ಬಿಸಾಡಿ ಆವೇಶದಲ್ಲಿ ಗೆಲುವನ್ನು ಸಂಭ್ರಮಿಸಿದರು. ಆದರೆ ಇದೀಗ ಅವರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಅವರು ಐಪಿಎಲ್ನ ನೀತಿ ಸಂಹಿತೆಯ 2.2 ಹಂತದ 1 ಅಪರಾಧವನ್ನು ಮಾಡಿದ್ದಾರೆ. ಈ ತಪ್ಪನ್ನು ಆವೇಶ್ ಒಪ್ಪಿಕೊಂಡಿದ್ದಾರೆ. ಜತೆಗೆ ಈ ನಿಯಮ ಉಲ್ಲಂಘನೆಯಡಿಯಲ್ಲಿ ಬರುವ ಶಿಕ್ಷೆ ಎದುರಿಸಲು ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಾಗಿ, ಪಂದ್ಯದ ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. ಒಂದೊಮ್ಮೆ ಮ್ಯಾಚ್ ರೆಫ್ರಿ ಅವೇಶ್ ಖಾನ್ಗೆ ಒಂದು ಪಂದ್ಯ ನಿಷೇಧ ಹೇರಿದರೆ ಅಥವಾ ಪಂದ್ಯದ ಅರ್ಧ ಭಾಗ ದಂಡ ವಿಧಿಸಿದರೆ ಅದಕ್ಕೆ ಅವರು ಬದ್ಧರಾಗಿರಬೇಕು.
ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ಗೆ ಸೋಲಿನ ಆಘಾತದ ಮಧ್ಯೆ ಮತ್ತೊಂದು ಆಘಾತ ಎದುರಾಗಿದೆ. ಸ್ಲೋ ಓವರ್ ರೇಟ್ಗಾಗಿ ಅವರಿಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ. ನಿದಿತ ಸಮಯದೊಳಗೆ ಓವರ್ ಪೂರ್ಣಗೊಳಿಸಿದ ಕಾರಣ ಅವರು ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಕೊನೆಯ ಓವರ್ ವೇಳೆ ಆರ್ಸಿಬಿ ನಿಗದಿಯ ಸಮಯಕ್ಕಿಂತ ಎರಡು ಓವರ್ ಹಿಂದಿತ್ತು.