ಜೈಪುರ: ಗುಜರಾತ್ ಟೈಟನ್ಸ್ ವಿರುದ್ಧದ ಹೀನಾಯ ಸೋಲಿಗೆ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕಾರಣ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 9 ವಿಕೆಟ್ಗಳ ಅಂತರದಿಂದ ಸೋಲು ಕಂಡಿತ್ತು.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, “ಪವರ್ ಪ್ಲೇಯಲ್ಲಿ ನಾವು ರನ್ ಗಳಿಸಲು ವಿಫಲವಾದದ್ದು ಸೋಲಿಗೆ ಪ್ರಮುಖ ಕಾರಣ. ಪವರ್ ಪ್ಲೇ ಮುಕ್ತಾಯಗೊಳ್ಳುವ ಮುನ್ನವೇ ನಾವು ಹಲವು ವಿಕೆಟ್ಗಳನ್ನು ಕೈಚೆಲ್ಲಿದ್ದೆವು. ಇದು ನಮಗೆ ಹಿನ್ನಡೆಯಾಗಿ ಪರಿಣಮಿಸಿತು” ಎಂದು ಸಂಜು ಹೇಳಿದರು.
“ಗುಜರಾತ್ ವಿರುದ್ಧದ ಪಂದ್ಯದಲ್ಲಿ ನಾವು ತೋರಿದ ಪ್ರದರ್ಶನವನ್ನು ಅವಲೋಕನ ಮಾಡುವಾಗ ನಾವು ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆಯೇ ಎಂದು ಪ್ರಶ್ನೆ ಮೂಡಿತ್ತು. ಆದರೆ ಮುಂದಿನ ಪಂದ್ಯಗಳಲ್ಲಿ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳುವ ವಿಶ್ವಾಸವಿದೆ” ಎಂದು ಸಂಜು ಹೇಳಿದರು.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ 48ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ತಂಡ ರಶೀದ್ ಖಾನ್(3) ಮತ್ತು ನೂರ್ ಅಹ್ಮದ್(2) ಅವರ ಬೌಲಿಂಗ್ ದಾಳಿಗೆ 17.5 ಓವರ್ಗಳಲ್ಲಿ 118 ರನ್ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ 13.5 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 119 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ IPL 2023: ರಾಹುಲ್ ಬದಲು ಲಕ್ನೋ ತಂಡ ಸೇರಿದ ಕನ್ನಡಿಗ ಕರುಣ್ ನಾಯರ್
ಚೇಸಿಂಗ್ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಕೇವಲ 15 ಎಸೆತಗಳಲ್ಲಿ ಅಜೇಯ 39 ರನ್ ಬಾರಿಸಿದರು. ಈ ಇನಿಂಗ್ಸ್ ವೇಳೆ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಸಿಡಿಯಿತು. ವೃದ್ಧಿಮಾನ್ ಸಾಹಾ ಅಜೇಯ 41 ರನ್ ಗಳಿಸಿದರು. ಗಿಲ್ 36 ರನ್ ಬಾರಿಸಿ ಚಹಲ್ಗೆ ವಿಕೆಟ್ ಒಪ್ಪಿಸಿದರು. ಗುಜರಾತ್ ಪರ ಅಫಘಾನಿಸ್ತಾನದ ಸ್ಪಿನ್ನರ್ಗಳಾದ ರಶೀದ್ ಖಾನ್(3) ಮತ್ತು ನೂರ್ ಅಹ್ಮದ್(2) ವಿಕೆಟ್ ಕಿತ್ತು ಮಿಂಚಿದರು.