ಕೋಲ್ಕೊತಾ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಗುರುವಾರದ ಪಂದ್ಯದಲ್ಲಿ ದುರ್ವರ್ತನೆ ತೋರಿದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜಾಸ್ ಬಟ್ಲರ್(Jos Buttler) ಅವರಿಗೆ ಬಿಸಿಸಿಐ ದಂಡ ವಿಧಿಸಿದೆ.
ಕೋಲ್ಕೊತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಆಘಾತದ ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 149 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ಒಂದು ವಿಕೆಟ್ ಕಳೆದುಕೊಂಡು ಕೇವಲ 13.1 ಓವರ್ನಲ್ಲಿ 151 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ವೇಳೆ ಯಶಸ್ವಿ ಜೈಸ್ವಾಲ್ ಅವರು ಇಲ್ಲದ ರನ್ ಕದಿಯುವ ಪ್ರಯತ್ನದಲ್ಲಿ ಜಾಸ್ ಬಟ್ಲರ್ ಅವರನ್ನು ರನೌಟ್ ಮಾಡಿದರು. ಶೂನ್ಯಕ್ಕೆ ಔಟಾದ ಬಟ್ಲರ್ ಅವರು ಸಿಟ್ಟಿನಿಂದಲೇ ಮೈದಾನ ತೊರೆದರು. ಈ ವೇಳೆ ಅವರು ಬೌಂಡರಿ ಲೈನ್ನ ಕವರ್ಗೆ ಬ್ಯಾಟ್ನಿಂದ ಜೋರಾಗಿ ಬಡಿದು ತನ್ನ ಸಿಟ್ಟನ್ನು ಹೊರಹಾಕಿದರು. ಬಟ್ಲರ್ ಅವರ ಈ ದುರ್ವರ್ತನೆಗೆ ಬಿಸಿಸಿಐ ಪಂದ್ಯ ಶೇ.10 ರಷ್ಟು ದಂಡ ವಿಧಿಸಿದೆ.
ಐಪಿಎಲ್ನ ಕೋಡ್ ಆಫ್ ಕಂಡಕ್ಟ್ನ ಮೊದಲ ಅಪರಾಧವನ್ನು ಜಾಸ್ ಬಟ್ಲರ್ ಅವರು ಒಪ್ಪಿಕೊಂಡಿದ್ದಾರೆ. ಇದನ್ನು ಉಲ್ಲಂಸಿದರೆ, ಪಂದ್ಯದ ರೆಫ್ರಿ ನಿರ್ಧಾರವು ಅಂತಿಮ ಮತ್ತು ಅದಕ್ಕೆ ಆಟಗಾರರು ಬದ್ಧರಾಗಿರಬೇಕಾಗಿದೆ ಎಂದು ಐಪಿಎಲ್ ಹೇಳಿಕೆ ತಿಳಿಸಿದೆ.
ದಾಖಲೆ ಬರೆದ ಜೈಸ್ವಾಲ್
ಜಾಸ್ ಬಟ್ಲರ್ ಅವರನ್ನು ರನೌಟ್ ಮಾಡಿದರೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ ಅವರು ಸಿಡಿಲಬ್ಬರ್ ಬ್ಯಾಟಿಂಗ್ ನಡೆಸಿ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿಸುವ ಮೂಲಕ ಐಪಿಎಲ್ನಲ್ಲಿ ಇತಿಹಾಸವೊಂದನ್ನು ನಿರ್ಮಿಸಿದರು. ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಆರಂಭದಿಂದಲೂ ಸಿಕ್ಸರ್ ಬೌಂಡರಿಗಳ ಸುರಿ ಮಳೆ ಸುರಿಸಿದ ಜೈಸ್ವಾಲ್ ಅವರು 47 ಎಸೆತಗಳಲ್ಲಿ 98 ರನ್ ಬಾರಿಸಿ ಅಜೇಯರಾಗಿ ಉಳಿದರು. ಕೇವಲ 2 ರನ್ ಅಂತರದಿಂದ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಸಂಜು ಸ್ಯಾಮ್ಸನ್ 29 ಎಸೆತಗಳಲ್ಲಿ ಅಜೇಯ 48 ರನ್ ಸಿಡಿಸಿದರು. ಇವರು ಕೂಡ 2 ರನ್ ಅಂತರದಲ್ಲಿ ಅರ್ಧಶತಕದಿಂದ ವಂಚಿತರಾದರು.