Site icon Vistara News

IPL 2023| ಐಪಿಎಲ್​ನಲ್ಲೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ತರಲು ಬಿಸಿಸಿಐ ಚಿಂತನೆ!

ipl2023

ಮುಂಬಯಿ: 2023ರ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (IPL 2023) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ಬದಲಾವಣೆಯೊಂದನ್ನು ಮಾಡಲು ಚಿಂತನೆ ನಡೆಸಿದೆ. ಅದರಂತೆ ಈ ಸೀಸನ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಎಂಬ ನಿಯಮವನ್ನು ಅಳವಡಿಸಲು ಬಿಸಿಸಿಐ ಮುಂದಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯುವ ಮಿನಿ ಹರಾಜು ಪ್ರಕ್ರಿಯೆಗೆ ಎಲ್ಲ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿದೆ. ಈ ಮಧ್ಯೆ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೀಗಿರುವಾಗ ಐಪಿಎಲ್ 2023 ಟೂರ್ನಿಯಲ್ಲಿ ಬಿಸಿಸಿಐ (BCCI) ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮವನ್ನು ಬಿಸಿಸಿಐ ಪ್ರಯೋಗಿಸಿ ಯಶಸ್ಸು ಕಂಡಿತ್ತು. ಹೀಗಾಗಿ ಐಪಿಎಲ್​ನಲ್ಲಿಯೂ ಈ ನಿಯಮ ಜಾರಿಗೆ ತರಲು ಮುಂದಾಗಿದೆ.

ಹೇಗಿರಲಿದೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಎಂದರೆ ಆಟದ ನಡುವೆ ಬದಲಿ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆ ಪ್ರಕ್ರಿಯೆ. ಈ ನಿಯಮ ವಿದೇಶಿ ಟಿ20 ಲೀಗ್​ಗಳಲ್ಲಿ ಚಾಲ್ತಿಯಲ್ಲಿದೆ. ಭಾರತದಲ್ಲಿ ದೇಶಿಯ ಕ್ರಿಕೆಟ್​ನಲ್ಲಿ ಈ ನಿಯಮ ಜಾರಿಯಲ್ಲಿದ್ದರೂ ಲೀಗ್​ ಕ್ರಿಕೆಟ್​ನಲ್ಲಿ ಇದು ಮೊದಲ ಪರಿಚಯವಾಗಲಿದೆ. ಈ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಪಂದ್ಯದ ಮಧ್ಯೆ ಆಟಗಾರರನ್ನು ಬದಲಿಸಬಹುದು. ಆದರೆ ಈ ನಿಯಮವನ್ನು ಬಳಸುವುದು ಉಭಯ ತಂಡಗಳ ಆಯ್ಕೆಗೆ ಬಿಟ್ಟ ವಿಚಾರವಾಗಿದೆ.

ಈ ನಿಯಮದ ಪ್ರಕಾರ ಪ್ರತಿ ತಂಡವು ಟಾಸ್ ಪ್ರಕ್ರಿಯೆ ವೇಳೆ ಪ್ಲೇಯಿಂಗ್ ಇಲೆವೆನ್ ಹೆಸರಿಸುವಾಗ ಹೆಚ್ಚುವರಿ 4 ಆಟಗಾರರ ಹೆಸರನ್ನು ನೀಡಬೇಕಾಗುತ್ತದೆ. ಅಂದರೆ ಟಾಸ್ ಸಮಯದಲ್ಲೇ ಒಟ್ಟು 14 ಆಟಗಾರರ ಹೆಸರನ್ನು ಘೋಷಿಸಬೇಕು. ಪಂದ್ಯ ಆರಂಭದ ಬಳಿಕ ತಂಡಗಳು ಹೆಸರಿಸಿದ ಈ ಹೆಚ್ಚುವರಿ ನಾಲ್ಕು ಆಟಗಾರರಲ್ಲಿ ಯಾರನ್ನು ಬೇಕಾದರೂ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಆದರೆ ಇಲ್ಲೂ ಕೆಲವು ನಿಯಮವಿದೆ. ಇನಿಂಗ್ಸ್​ನ 14ನೇ ಓವರ್​ಗೂ ಮೊದಲು ಈ ಬದಲಾವಣೆಯನ್ನು ಮಾಡಿಕೊಳ್ಳಬೇಕಿದೆ ನಂತರ ಈ ನಿಯಮ ಮಾನ್ಯವಾಗುವುದಿಲ್ಲ. ಆದರೆ ಕನ್ ಕಷನ್ ನಿಯಮ ಅನ್ವಯವಾಗಲಿದೆ.​

ಇಂಪ್ಯಾಕ್ಟ್ ಪ್ಲೇಯರ್ ಮೂಲಕ ಬದಲಿ ಆಟಗಾರನಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಣಕ್ಕಿಳಿದರೆ ಆಗ ಒಬ್ಬ ಆಟಗಾರ ಹೊರಹೋಗಬೇಕಾಗುತ್ತದೆ. ಅಂತೆಯೆ ಹೊರಹೋದ ಆಟಗಾರ ಆ ಬಳಿಕ ಯಾವುದೇ ರೂಪದಲ್ಲಿ ಪಂದ್ಯದ ಭಾಗವಾಗಲು ಸಾಧ್ಯವಾಗುವುದಿಲ್ಲ. ಬದಲಿ ಫೀಲ್ಡರ್, ರನ್ನರ್ ಆಗಿಯೂ ಕೂಡ ಕಣಕ್ಕಿಳಿಯಲು ಅವಕಾಶ ಇರುವುದಿಲ್ಲ. ಉಳಿದಂತೆ ಬ್ಯಾಟಿಂಗ್ ತಂಡವು ವಿಕೆಟ್ ಕಳೆದುಕೊಂಡ ಸಂದರ್ಭ ಅಥವಾ ಇನ್ನಿಂಗ್ಸ್ ವಿರಾಮದ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಪರಿಚಯಿಸಬಹುದು. ಹೀಗೆ ಕಣಕ್ಕಿಳಿದ ಆಟಗಾರನಿಗೆ ಆಡುವ ಬಳಗದಲ್ಲಿದ್ದ ಆಟಗಾರರಷ್ಟೇ ಅಧಿಕಾರ ಇರುತ್ತದೆ. ಒಂದು ವೇಳೆ ಫೀಲ್ಡಿಂಗ್ ತಂಡವು ಬೌಲರ್ ಅನ್ನು ಕಣಕ್ಕಿಳಿಸಲು ಬಯಸಿದರೆ, ಸಂಪೂರ್ಣ ಓವರ್​ ಎಸೆಯುವ ಅವಕಾಶ ಕೂಡ ಇರಲಿದೆ. ಅಂದರೆ ಒಂದಕ್ಕಿಂತ ಹೆಚ್ಚು ಓವರ್‌ಗಳನ್ನು ಬೌಲ್ ಮಾಡದಿದ್ದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರುವ ಆಟಗಾರನಿಗೆ ಪೂರ್ಣ 4 ಓವರ್‌ಗಳನ್ನು ಬೌಲಿಂಗ್​ ನಡೆಸಲು ಅನುಮತಿ ನೀಡಲಾಗುತ್ತದೆ.

ಡಕ್​ವರ್ತ್​ ನಿಯಮದ ವೇಳೆ ಈ ನಿಯಮ ಅನ್ವಯಿಸುವುದಿಲ್ಲ

ಒಂದೊಮ್ಮ ಪಂದ್ಯ ಆರಂಭಕ್ಕೂ ಮುನ್ನ ಮಳೆಯಿಂದ ಅಡಚಣೆಯಾಗಿ ಡಕ್​ವರ್ತ್​ ಲೂಯಿಸ್ ಅಥವಾ ಇತರ ಕಾರಣದಿಂದ ಪಂದ್ಯವನ್ನು 10 ಓವರ್​ಗಳಿಗೆ ಸೀಮಿತಗೊಳಿಸಿದರೆ ಆಗ ಈ ಪಂದ್ಯಗಳಿಗೆ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯನ್ನು ನೀಡಲಾಗುವುದಿಲ್ಲ. ಆರಂಭದಲ್ಲಿ ಪ್ರಕಟಿಸಿದ ಪ್ಲೇಯಿಂಗ್​ ಇಲೆವೆನ್​ ಆಟಗಾರರೇ ಪಂದ್ಯವನ್ನಾಡಬೇಕಾಗುತ್ತದೆ.

ಇದನ್ನೂ ಓದಿ | Team India | ಟಿ20ಗಿಂತ ಒಡಿಐಗಿಂತ ಎರಡೂವರೆ ಪಟ್ಟು ದೊಡ್ಡದು ಎಂದು ರವಿ ಶಾಸ್ತ್ರಿ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

Exit mobile version