ಚೆನ್ನೈ: ಮಂಗಳವಾರ ರಾತ್ರಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು 15 ರನ್ಗಳಿಂದ ಬಗ್ಗುಬಡಿಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪ್ರವೇಶಿಸಿತು. ಆದರೆ ಈ ಪಂದ್ಯದಲ್ಲಿ ಸ್ಕೋರ್ ಬೋರ್ಡ್ನಲ್ಲಿ ಕಾಣಿಸಿಕೊಂಡ ಎಮೋಜಿಯೊಂದು ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದ ವೇಳೆ ಪ್ರತಿ ಡಾಡ್ ಬಾಲ್ ಆದಾಗ ಆ ಸ್ಥಾನದಲ್ಲಿ ಹಸಿರು ಮರದ ಗ್ರಾಫಿಕ್ಸ್ ಚಿತ್ರವನ್ನು ನೀಡಲಾಗಿತ್ತು. ಆರಂಭದಲ್ಲಿ ಇದು ಯಾವ ಕಾರಣಕ್ಕೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು. ಇದೀಗ ಈ ಚಿತ್ರವನ್ನು ನೀಡಲು ಕಾರಣ ಏನೆಂಬುದನ್ನು ಬಿಸಿಸಿಐ ತಿಳಿಸಿದೆ.
ಇಂತಹದೊಂದು ಚಿತ್ರ ನೀಡಲು ಮುಖ್ಯ ಕಾರಣ ಬಿಸಿಸಿಐ ಕೈಗೊಂಡಿರುವ ಹೊಸ ಅಭಿಯಾನ. ಐಪಿಎಲ್ನ ಪ್ಲೇ ಆಫ್ ಪಂದ್ಯಗಳ ವೇಳೆ ಆಗುವ ಪ್ರತಿ ಡಾಟ್ ಬೌಲ್ಗೂ 500 ಮರಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿದೆ. ಹೀಗಾಗಿ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರವನ್ನು ಬಳಸಲಾಗಿದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಬಿಸಿಸಿಐ ಈ ಮಹತ್ವದ ಅಭಿಯಾನವನ್ನು ಕೈಗೊಂಡಿದೆ. ಸದ್ಯ ಬಿಸಿಸಿಐಯ ಈ ನಿರ್ಧಾರಕ್ಕೆ ಹಲವು ಪರಿಸರ ಸಂರಕ್ಷಣ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿವೆ.
ಆರ್ಸಿಬಿಯಿಂದ ಗೋ ಗ್ರೀನ್’ ಅಭಿಯಾನ
2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ.
ಪಂದ್ಯ ಗೆದ್ದ ಚೆನ್ನೈ
ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮಂಗಳವಾರದ ಈ ಕ್ವಾಲಿಫೈಯರ್-1 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಟ್ರ್ಯಾಕ್ನಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಜವಾಬಿತ್ತ ಗುಜರಾತ್ ತಂಡ ತನ್ನ ಪಾಲಿನ ಆಟದಲ್ಲಿ 157 ರನ್ಗಳಿಗೆ ಸರ್ವಪತನ ಕಂಡಿತು. ಗೆದ್ದ ಚೆನ್ನೈ ಫೈನಲ್ಗೆ ಲಗ್ಗೆಯಿಟ್ಟಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಚೆನ್ನೈ 10ನೇ ಬಾರಿ ಫೈನಲ್ ಪ್ರವೇಶಿಸಿದ ಹಿರಿಮೆಗೆ ಪಾತ್ರವಾಯಿತು.
ಇದನ್ನೂ ಓದಿ IPL 2023: ಸೂಪರ್ ಗೆಲುವಿನೊಂದಿಗೆ ಫೈನಲ್ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್
ಸೋತ ಗುಜರಾತ್ ತಂಡ ಬುಧವಾರ ನಡೆಯುವ ಮುಂಬೈ ಮತ್ತು ಲಕ್ನೋ ವಿರುದ್ಧದ ಪಂದ್ಯದ ವಿಜೇತರನ್ನು ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್ನಲ್ಲಿ ಶುಕ್ರವಾರ ನಡೆಯಲಿದೆ. ಗುಜರಾತ್ ವಿರುದ್ಧ ಚೆನ್ನೈ ದಾಖಲಿಸಿದ ಮೊದಲ ಗೆಲುವು ಇದಾಗಿದೆ. ಈ ಹಿಂದೆ ಆಡಿದ್ದ ಮೂರು ಪಂದ್ಯಗಳಲ್ಲಿಯೂ ಧೋನಿ ಪಡೆ ಸೋಲು ಕಂಡಿತ್ತು.