ಚೆನ್ನೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ 16ನೇ ಆವೃತ್ತಿಯ ಐಪಿಎಲ್ ಟೂರ್ನಿ(IPL 2023) ಆರಂಭಕ್ಕೆ ಇನ್ನೇನು ಒಂದು ವಾರ ಬಾಕಿ ಇದೆ. ಈ ಟೂರ್ನಿಗಾಗಿ ಎಲ್ಲ ತಂಡಗಳು ಭರದ ಸಿದ್ಧತೆಯಲ್ಲಿ ತೊಡಗಿವೆ. ಉದ್ಘಾಟನಾ ಪಂದ್ಯ ಮಾರ್ಚ್ 31ಕ್ಕೆ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದೆ.
ಚೆನ್ನೈ ತಂಡದ ಆಟಗಾರರಾದ ಬೆನ್ ಸ್ಟೋಕ್ಸ್(Ben Stokes) ಮತ್ತು ಮೊಯಿನ್ ಅಲಿ(Moeen Ali) ಅವರು ಶುಕ್ರವಾರ ಭಾರತಕ್ಕೆ ಆಗಮಿಸಿದ್ದು ತಂಡದ ಕ್ಯಾಂಪ್ ಸೇರಿದ್ದಾರೆ. ಈ ವಿಚಾರವನ್ನು ಫ್ರಾಂಚೈಸಿ ಟ್ವಿಟರ್ ಮೂಲಕ ಖಚಿತಪಡಿಸಿದೆ. ಇದೇ ವೇಳೆ ತಂಡದ ಆಟಗಾರನಾದ ರವೀಂದ್ರ ಜಡೇಜಾ ಅವರು ‘ಎಲ್ಲೋ ಆರ್ಮಿಗೆ ಸ್ವಾಗತ’ ಎಂದು ಉಭಯ ಆಟಗಾರರಿಗೆ ಸ್ವಾಗತ ಕೋರಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ಕಳೆದ ಡಿಸೆಂಬರ್ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬರೋಬ್ಬರಿ 16.25 ಕೋಟಿ ರೂ.ಗೆ ಖರೀದಿಸಿತ್ತು. ಹರಾಜಿಗೂ ಮುನ್ನ ಸ್ಟೋಕ್ಸ್ ಅವರು ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಸಾರಥ್ಯದ ತಂಡದಲ್ಲಿ ಆಡಬೇಕು ಎಂಬ ಮಹದಾಸೆಯನ್ನು ವ್ಯಕ್ತಪಡಿಸಿದ್ದರು. ಅವರ ಆಸೆಯಂತೆ ಹರಾಜಿನಲ್ಲಿ ಚೆನ್ನೈ ತಂಡ ಅವರನ್ನು ಖರೀದಿಸುವಲ್ಲಿ ಯಶಸ್ಸು ಕಂಡಿತ್ತು. ಇನ್ನೊಂದೆಡೆ ಎಂ.ಎಸ್. ಧೋನಿ(MS Dhoni) ಅವರು ಈ ಬಾರಿ ಐಪಿಎಲ್ ಬಳಿಕ ನಿವೃತ್ತಿ ಹೇಳುವುದು ಬಹುತೇಖ ಖಚಿತಗೊಂಡಿದೆ. ಹೀಗಾಗಿ ಧೋನಿ ಬಳಿಕ ಚೆನ್ನೈ ತಂಡವನ್ನು ಸ್ಟೋಕ್ಸ್ ಮುನ್ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
6 ವರ್ಷಗಳ ಬಳಿಕ ಜತೆಯಾಗಲಿದ್ದಾರೆ ಧೋನಿ-ಸ್ಟೋಕ್ಸ್
ಧೋನಿ ಮತ್ತು ಬೆನ್ ಸ್ಟೋಕ್ಸ್ ಈ ಹಿಂದೆ ಐಪಿಎಲ್‌ನಲ್ಲಿ ಜತೆಯಾಗಿ ಆಡಿದ್ದಾರೆ. ತಂಡದಲ್ಲಿ ಭ್ರಷ್ಟಾಚಾರ ಹಾಗೂ ಸ್ಪಾಟ್ ಫಿಕ್ಸಿಂಗ್‌ನಂತಹ ಪ್ರಕರಣ ನಡೆದ ಹಿನ್ನೆಲೆಯಲ್ಲಿ 2016 ಹಾಗೂ 2017ರ ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಬ್ಯಾನ್ ಮಾಡಲಾಗಿತ್ತು. ಈ ವೇಳೆ ಸ್ಟೋಕ್ಸ್ ಮತ್ತು ಧೋನಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ಪರ ಆಡಿದ್ದರು. ಇದೀಗ 6 ವರ್ಷಗಳ ಬಳಿಕ ಜತೆಯಾಗಿ ಆಡಲಿದ್ದಾರೆ.