ಗುವಾಹಟಿ: ಬ್ಯಾಟಿಂಗ್ ಟ್ರ್ಯಾಕ್ನಲ್ಲಿ ಬೊಂಬಾಟ್ ಆಟವಾಡಿದ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ವಿರುದ್ಧ 199 ರನ್ ಬಾರಿಸಿದೆ. ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್(60), ಜಾಸ್ ಬಟ್ಲರ್(79) ರನ್ ಗಳಿಸಿ ಮಿಂಚಿದರು. ಗುವಾಹಟಿಯ(Guwahati) ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆಯುತ್ತಿರುವ ಶನಿವಾರದ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಸವಾಲೊಡ್ಡಿದೆ. ಡೆಲ್ಲಿ ಗೆಲುವಿಗೆ ಭರ್ತಿ 200 ರನ್ ಬಾರಿಸಬೇಕಿದೆ.
ಜೋಶ್ನಿಂದ ಬ್ಯಾಟ್ ಬೀಸಿದ ಬಟ್ಲರ್, ಜೈಸ್ವಾಲ್
ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ತಂಡಕ್ಕೆ ಜಾಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಜೋಶ್ನಿಂದಲೇ ಬ್ಯಾಟ್ ಬೀಸಲಾರಂಭಿಸಿದರು. ಡೆಲ್ಲಿ ಬೌಲರ್ಗಳ ಮೇಲೆ ಸವಾರಿ ಮಾಡಿದ ಉಭಯ ಆಟಗಾರರು ಬೌಂಡರಿ ಸಿಕ್ಸರ್ಗಳ ಮಳೆಯನ್ನೇ ಹರಿಸಿದರು. ಪ್ರತಿ ಓವರ್ಗೆ 10ರ ಸರಾಸರಿಯಲ್ಲಿ ಬ್ಯಾಟ್ ಬೀಸಿ ಪವರ್ ಪ್ಲೇಯಲ್ಲಿ 68 ರನ್ ಒಟ್ಟು ಗೂಡಿಸಿದರು.
ಆರಂಭದಲ್ಲಿ ಬಟ್ಲರ್ ಅವರು ನಿಧಾನಗತಿಯ ಆಟಕ್ಕೆ ಒತ್ತು ಕೊಟ್ಟರು. 17 ರನ್ಗಳಿಸಿದ್ದ ವೇಳೆ ಒಂದು ಜೀವದಾನವನನ್ನೂ ಪಡೆದರು. ಖಲೀಲ್ ಅಹ್ಮದ್ ಅವರ ಓವರ್ನಲ್ಲಿ ಅನ್ರಿಜ್ ನೋರ್ಜೆ ಕ್ಯಾಚ್ ಕೈಚೆಲ್ಲಿದರು. ಆದರೆ ಮತ್ತೊಂದು ಬದಿಯಲ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಎಡಗೈ ಬ್ಯಾಟರ್ ಜೈಸ್ವಾಲ್ ಅರ್ಧಶತಕ ಬಾರಿಸಿ ಮಿಂಚಿದರು. ಕುಲ್ದೀಪ್ ಯಾದವ್ ಅವರ ಮೊದಲ ಓವರ್ನಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ ಜೈಸ್ವಾಲ್ ಅವರು ಮುಕೇಶ್ ಕುಮಾರ್ ಅವರ ಮುಂದಿನ ಓವರ್ನಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಅವರು 31 ಎಸೆತಗಳಿಂದ 11 ಬೌಂಡರಿ ಮತ್ತು ಒಂದು ಸಿಕ್ಸರ್ ನರವಿನಿಂದ 60 ರನ್ ಬಾರಿಸಿದರು. ಬಟ್ಲರ್ ಮತ್ತು ಜೈಸ್ವಾಲ್ ಸೇರಿ ಮೊದಲ ವಿಕೆಟ್ಗೆ 98ರನ್ಗಳ ಜತೆಯಾಟ ನಡೆಸಿದರು.
ಇದನ್ನೂ ಓದಿ IPL 2023: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಮಿಶ್ರ ಪ್ರತಿಕ್ರಿಯೆ; ತಂಡಗಳಿಂದ ಅಭಿಪ್ರಾಯ ಕೇಳಿದ ಬಿಸಿಸಿಐ
ಮೊದಲೆರಡು ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ನಾಯಕ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಶೂನ್ಯ ಸಂಕಟಕ್ಕೆ ಸಿಲುಕಿದರು. 4 ಎಸೆತ ಎದುರಿಸಿ ಖಾತೆ ತೆರೆಯುವಲ್ಲಿ ವಿಫಲರಾದರು. ಜೈಸ್ವಾಲ್ ಮತ್ತು ಸಂಜು ವಿಕೆಟ್ ಪತನದ ಬಳಿಕ ಬಟ್ಲರ್ ತಮ್ಮ ಬ್ಯಾಟಿಂಗ್ಗೆ ವೇಗ ನೀಡಲಾರಂಭಿಸಿದರು. ಇದೇ ವೇಳೆ ಅವರು ತಮ್ಮ ಅರ್ಧಶತಕವನ್ನು ಪೂರೈಸಿದರು. ರನ್ ಗಳಿಸಲು ಪರದಾಡಿದ ರಿಯಾನ್ ಪರಾಗ್ 11 ಎಸೆತ ಎದುರಿಸಿ 7 ರನ್ಗೆ ಸೀಮಿತಗೊಂಡರು. ಉತ್ತಮ ಸ್ಥಿತಿಯಲ್ಲಿದ್ದ ರಾಯಲ್ಸ್ ಒಂದು ಹಂತದಲ್ಲಿ ದಿಢೀರ್ ಕುಸಿತ ಕಂಡಿತು. ಆದರೆ ಶಿಮ್ರಾನ್ ಹೆಟ್ಮೈರ್ ಅವರು ಬಟ್ಲರ್ ಜತೆಗೂಡಿ ಉತ್ತಮ ಇನಿಂಗ್ಸ್ ಕಟ್ಟಿದರು. ಇದರಿಂದ ರನ್ ಗತಿ ಮತ್ತೆ ಏರಿಕೆ ಕಂಡಿತು.
ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ ಬಟ್ಲರ್ 51 ಎಸೆತಗಳಿಂದ 79 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಯಿತು. ಈ ವಿಕೆಟ್ ಕೂಡ ಮುಕೇಶ್ ಕುಮಾರ್ ಪಾಲಾಯಿತು. ಜೈಸ್ವಾಲ್ ವಿಕೆಟ್ ಕೂಡ ಇವರೇ ಕಿತ್ತಿದ್ದರು. ಬಟ್ಲರ್ ವಿಕೆಟ್ ಪತನಗೊಂಡರೂ ಶಿಮ್ರಾನ್ ಹೆಟ್ಮೈರ್ ತಮ್ಮ ಬ್ಯಾಟಿಂಗ್ ಪ್ರತಾಪವನ್ನು ಮುಂದುವರಿಸಿದರು. ಅಂತಿಮ ಓವರ್ನಲ್ಲಿ 2 ಸಿಕ್ಸರ್ ಬಾರಿಸಿದರು. ಕೇವಲ 20 ಎಸೆತ ಎದುರಿಸಿದ ಅವರು ಭರ್ಜರಿ ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ ಅಜೇಯ 39 ರನ್ ಸಿಡಿಸಿದರು. ಡೆಲ್ಲಿ ಪರ ಖಲೀಲ್ ಅಹ್ಮದ್ 2 ಓವರ್ಗಳಿಂದ 31 ರನ್ ಬಿಟ್ಟುಕೊಟ್ಟು ದುಬಾರಿಯಾಗಿ ಪರಿಣಮಿಸಿದರು.