ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್(rishabh pant) ಅವರು ಕ್ರಿಕೆಟ್ಗೆ ಮತ್ತೆ ಮರಳುತ್ತೇನೆ, ಕ್ರಿಕೆಟ್ ಇಲ್ಲದೇ ನಾನಿರಲ್ಲ ಎಂದು ಹೇಳಿದ್ದಾರೆ. ಪಂತ್ ಅವರ ಈ ಹೇಳಿಕೆಯಿಂದ ಅಭಿಮಾನಿಗಳಿಗೆ ಪ್ರಶ್ನೆಯೊಂದು ಮೂಡಿದೆ. ಪಂತ್ ಅವರು ಈ ಬಾರಿಯ ಐಪಿಎಲ್(IPL 2023) ಪಂದ್ಯ ನೋಡಲು ಬರುತ್ತಾರೆ ಎಂದು ಕೆಲವರು ಸಂತೋಷಗೊಂಡಿದ್ದಾರೆ. ಅಸಲಿಗೆ ಪಂತ್ ಅವರು ಈ ಮಾತನ್ನು ಜಾಹಿರಾತಿನಲ್ಲಿ ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ವರ್ಷಾಂತ್ಯದಲ್ಲಿ ಭೀಕರ ಕಾರು ಅಪಘಾತಕ್ಕೀಡಾಗಿ ತೀವ್ರ ಗಾಯಕ್ಕೆ ತುತ್ತಾಗಿದ್ದರು ಪಂತ್ ಸದ್ಯ ಮನೆಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಅವರು ಈ ಬಾರಿಯ ಐಪಿಎಲ್ನಿಂದಲೂ ದೂರ ಉಳಿದಿದ್ದಾರೆ. ಅವರ ಬದಲಿಗೆ ಈಗಾಗಲೇ ಬಂಗಾಳದ ಯುವ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ನಾಯಕನ ಸ್ಥಾನವನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ಗೆ ನೀಡಲಾಗಿದೆ.
ಐಪಿಎಲ್ ಆರಂಭಕ್ಕೂ ಮುನ್ನ ಆಹಾರ ವಿತರಕ ಸಂಸ್ಥೆಯಾದ ಜೊಮ್ಯಾಟೊ(zomato) ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಪಂತ್ ಅವರು ಆಹಾರ ಮತ್ತು ಕ್ರಿಕೆಟ್ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ಮತ್ತೆ ಕ್ರಿಕೆಟ್ಗೆ ಮರಳುವುದಾಗಿ ಹೇಳಿದ್ದಾರೆ. “ಕ್ರಿಕೆಟ್ ಮತ್ತು ಆಹಾರ ಇದೆರಡು ಇಲ್ಲದೆ ಬದುಕಲು ಸಾಧ್ಯವಿಲ್ಲ. ಕಳೆದ ಕೆಲವು ತಿಂಗಳುಗಳಿಂದ ನಾನು ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ ಆದರೆ ವೈದ್ಯರು ನನಗೆ ಸರಿಯಾಗಿ ತಿನ್ನಲು ಸಲಹೆ ನೀಡಿದರು. ಹಾಗಾಗಿ ಸಾಕಷ್ಟು ಆರೋಗ್ಯಕರವಾದ ಆಹಾರವನ್ನು ತಿನ್ನುತ್ತಿದ್ದೇನೆ. ಕ್ರಿಕೆಟ್ ಸೀಸನ್ ಆರಂಭವಾಗಿದೆ. ಆಗ ನನಗೆ ಅನ್ನಿಸಿತು ಎಲ್ಲರೂ ಕ್ರಿಕೆಟ್ ಆಡುತ್ತಿದ್ದಾರೆ ನಾನೇಕೆ ಆಡಬಾರದು ನಾನು ಇನ್ನೂ ಆಟವನ್ನು ಮರೆತಿಲ್ಲ, ಶೀಘ್ರವೇ ಆಡಲು ಬರುತ್ತಿದ್ದೇನೆ ಎಂದು ಈ ವಿಡಿಯೊದಲ್ಲಿ ಪಂತ್ ಹೇಳಿದ್ದಾರೆ.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ದಾಖಲೆ ಬರೆಯಲು ಸಜ್ಜಾದ ಮಹೇಂದ್ರ ಸಿಂಗ್ ಧೋನಿ
ಈ ಜಾಹಿರಾತಿನಲ್ಲಿ ಪಂತ್ ಹೀಗೆ ಹೇಳಲು ಕಾರಣವೆಂದರೆ, ಐಪಿಎಲ್ ಪಂದ್ಯಗಳನ್ನು ಮನೆಯಲ್ಲಿ ಕುಳಿತು ವೀಕ್ಷಿಸುವಾಗ ಜೊಮ್ಯಾಟೋದಲ್ಲಿ ಆಹಾರವನ್ನು ಆರ್ಡರ್ ಮಾಡಿ ತಿನ್ನಿ ಎಂಬರ್ಥದಲ್ಲಿ ಸಂದೇಶ ನೀಡಿದ್ದಾರೆ.
ಸುಧಾರಣೆಯ ಹಾದಿಯಲ್ಲಿ ಪಂತ್
ಕಳೆದ ಡಿಸೆಂಬರ್ 30 ರಂದು ಡೆಲ್ಲಿಯಿಂದ ಡೆಹ್ರಾಡೂನ್ಗೆ ಹೋಗುವ ಹಾದಿಯಲ್ಲಿ ರಿಷಭ್ ಪಂತ್ ಚಲಾಯಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಪವಾಡಸದೃಶ ಪಂತ್ ಪಾರಾಗಿದ್ದರು. ಮೊದಲಿಗೆ ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮಂಡಿಯ ಗಾಯಕ್ಕಾಗಿ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ಎಡಗೈ ಬ್ಯಾಟರ್ ಪ್ರಸ್ತುತ ಮನೆಯಲ್ಲಿಯೇ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಕಳೆದ ಕೆಲವೊಂದು ದಿನಗಳಿಂದ ಅವರು ತಾವು ಊರುಗೋಲಿನ ಸಮೇತ ನಡೆದುಕೊಂಡು ಹೋಗುವ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ Rishabh Pant: ರಿಷಭ್ ಪಂತ್ ಭೇಟಿಯಾದ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್
ಪಂತ್ ಅವರಿಗೆ ವಿಶ್ವಾಸ ತುಂಬ ನಿಟ್ಟಿನಲ್ಲಿ ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಧರಿಸುವ ಜೆರ್ಸಿ ಅಥವಾ ಕ್ಯಾಪ್ನಲ್ಲಿ ರಿಷಭ್ ಪಂತ್ ಜೆರ್ಸಿ ಸಂಖ್ಯೆ 17 ಪ್ರಿಂಟ್ ಮಾಡಲು ಮುಂದಾಗಿದ್ದಾರೆ ಎಂದೂ ಮೂಲಗಳು ತಿಳಿಸಿವೆ.