ಮುಂಬಯಿ: ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮಂಗಳವಾರದ ಐಪಿಎಲ್ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡ 6 ವಿಕೆಟ್ಗಳ ಅಂತದಿಂದ ಸೋಲು ಕಂಡಿದೆ. ಈ ಸೋಲಿನಿಂದ ಆರ್ಸಿಬಿಯ ಪ್ಲೇ ಆಫ್ ಹಾದಿ ಮತ್ತಷ್ಟು ದುರ್ಗಮವಾಗಿದೆ. ಪಂದ್ಯದ ಸೋಲಿಗೆ ನಾಯಕ ಫಾಪ್ ಡು ಪ್ಲೆಸಿಸ್ ಪ್ರಮುಖ ಕಾರಣ ನೀಡಿದ್ದಾರೆ. ಜತೆಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 54ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್‌ಸಿಬಿ 6 ವಿಕೆಟಿಗೆ 199 ರನ್ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಮುಂಬೈ ಇಂಡಿಯನ್ಸ್ ತಂಡವು 16.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿ ಭರ್ಜರಿ ಗೆಲುವು ಸಾಧಿಸಿತು. ಮುಂಬೈ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಪಂದ್ಯದ ಸೋಲಿನ ಬಳಿಕ ಮಾತನಾಡಿದ ನಾಯಕ ಡು ಪ್ಲೆಸಿಸ್ ನಮ್ಮ ತಂಡದ ಬೌಲರ್ಗಳು ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ತೋರದೇ ಇರುವುದು ಸೋಲಿಗೆ ಪ್ರಮುಖ ಕಾರಣ ಎಂದು ತೀಳಿಸಿದ್ದಾರೆ. ತಂಡದ ಪ್ರಮುಖ 5 ಬೌಲರ್ಗಳು ಪ್ರತಿ ಓವರ್ಗೆ 10ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟರು, ಇದು ನಮಗೆ ಹಿನ್ನಡೆಯಾಯಿತು ಎಂದರು.
ಸಿರಾಜ್ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ ಡು ಪ್ಲೆಸಿಸ್
ಆರಂಭಿಕ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಮೊಹಮ್ಮದ್ ಸಿರಾಜ್ ಅವರು ಆ ಬಳಿಕ ಆಡಿದ ಪ್ರತಿ ಪಂದ್ಯಗಳಲ್ಲಿಯೂ ಕಳಪೆ ಬೌಲಿಂಗ್ ನಡೆಸುತ್ತಿರುವ ಬಗ್ಗೆ ನಾಯಕ ಡು ಪ್ಲೆಸಿಸ್ ಬೇಸರ ವ್ಯಕ್ತಪಡಿಸಿದ್ದಾರೆ. ಅನುಭವಿ ಬೌಲರ್ ಸಿರಾಜ್ ಅವರು ದುಬಾರಿಯಾಗುತ್ತಿರುವುದು ಬೇಸರದ ಸಂಗತಿ. ಆರಂಭಿಕ ಪಂದ್ಯದಲ್ಲಿ ನೀಡಿದ ಪ್ರದರ್ಶನ ಈಗ ಅವರಿಂದ ಬರುತ್ತಿಲ್ಲ. ಮುಂದಿನ ಮಹತ್ವದ ಪಂದ್ಯದಲ್ಲಿ ಎಲ್ಲ ಬೌಲರ್ಗಳು ಜವಾಬ್ದಾರಿಯುತ ಬೌಲಿಂಗ್ ನಡೆಸದಿದ್ದರೆ ಟೂರ್ನಿಯಿಂದ ಹೊರ ಬೀಳುವುದು ಖಚಿತ ಎಂದು ಹೇಳುವ ಮೂಲಕ ಬೌಲರ್ಗಳಿಗೆ ಎಚ್ಚರಿಕೆಕ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ನೂತನ ಮೈಲುಗಲ್ಲು ತಲುಪಿದ ಸೂರ್ಯಕುಮಾರ್
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿಗೆ ಡು ಪ್ಲೆಸಿಸ್ ಅವರು ಆಧಾರವಾಗಿ ನಿಂತು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು. ಮುಂಬೈ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಮೂರು ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ 65 ರನ್ ಬಾರಿಸಿದರು. ಇವರಿಗೆ ಮ್ಯಾಕ್ಸ್ವೆಲ್ ಕೂಡ ಉತ್ತಮ ಸಾಥ್ ನೀಡಿದರು. ಮ್ಯಾಕ್ಸ್ವೆಲ್ 68 ರನ್ ಗಳಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್ ಸಾಹಸದಿಂದ ತಂಡ ಬೃಹತ್ ಮೊತ್ತ ದಾಖಲಿಸಿದರೂ ಬೌಲರ್ಗಳ ಕಳಪೆ ಪ್ರದರ್ಶನದಿಂದ ತಂಡ ಸೋಲು ಕಂಡಿತು.