Site icon Vistara News

IPL 2023: ಸ್ಟೋಯಿನಿಸ್​​, ಪೂರನ್​ ಬ್ಯಾಟಿಂಗ್​ ಆರ್ಭಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಾಯಕ ರಾಹುಲ್​

IPL 2023: Captain Rahul appreciates stoicism, Pooran's batting frenzy

IPL 2023: Captain Rahul appreciates stoicism, Pooran's batting frenzy

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಅತ್ಯಂತ ರೋಚಕ ಐಪಿಎಲ್​(IPL 2023) ಪಂದ್ಯದಲ್ಲಿ ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಲಕ್ನೋ ಸೂಪರ್​ಜೈಂಟ್ಸ್​ ತಂಡ ಒಂದು ವಿಕೆಟ್​ ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನ ಶ್ರೇಯವನ್ನು ನಾಯಕ ರಾಹುಲ್​ ಅವರು ಸ್ಟೋಯಿನಿಸ್​ ಮತ್ತು ನಿಕೋಲಸ್​ ಪೂರಣ್​ಗೆ ಅರ್ಪಿಸಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಎರಡೇ ವಿಕೆಟಿಗೆ 212 ರನ್‌ ಬಾರಿಸಿತು. ಕೊಹ್ಲಿ, ಮ್ಯಾಕ್ಸ್​ವೆಲ್, ಫಾಫ್​ ಡು ಪ್ಲೆಸಿಸ್​ ಸೇರಿಕೊಂಡು ಲಕ್ನೋ ಬೌಲರ್​ಗಳ ಬೆವರಿಳಿಸಿದರು. ಅದಾಗಲೇ ಆರ್​ಸಿಬಿ ಅಭಿಮಾನಿಗಳು ಈ ಮೂವರು ಆಟಗಾರ ಮೊದಲ ಅಕ್ಷರವನ್ನು ಒಟ್ಟುಗೂಡಿಸಿ ಕೆಜಿಎಫ್​ ಅಬ್ಬರ ಎಂದು ಪಂದ್ಯವನ್ನು ಗೆದ್ದೇ ಬಿಟ್ಟಂತೆ ಸಂಭ್ರಮಿಸಲಾರಂಭಿಸಿದ್ದರು. ಆದರೆ ‘ಪಿಚ್ಚರ್​ ಅಭಿ ಬಾಕಿ ಹೈ’ ಎಂಬಂತೆ ಸಿಡಿದು ನಿಂತ ಮಾರ್ಕಸ್‌ ಸ್ಟೋಯಿನಿಸ್‌ ಮತ್ತು ನಿಕೋಲಸ್‌ ಪೂರಣ್‌ ಸೇರಿಕೊಂಡು ಲಕ್ನೋಗೆ ರೋಚಕ ಜಯ ತಂದುಕೊಟ್ಟರು. ಅಷ್ಟರ ವರೆಗೆ ಆರ್​ಸಿಬಿ…ಆರ್​ಸಿಬಿ ಎಂದು ಕೂಗುತ್ತಿದ್ದ ಅಭಿಮಾನಿಗಳು ಸಪ್ಪೆ ಮೋರೆ ಹಾಕಿಕೊಂಡು ಸ್ಟೇಡಿಯಂನಿಂದ ಹೊರನಡೆದರು.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ನಾಯಕ ಕೆ.ಎಲ್​ ರಾಹುಲ್,​​ ನಾವು ಗೆದ್ದು ಎರಡು ಅಂಕ ಸಂಪಾದಿಸಿದ್ದೇವೆ ಎಂದರೆ, ಅದಕ್ಕೆ ಸ್ಟೋಯಿನಿಸ್​ ಮತ್ತು ಪೂರನ್ ಅವರ ಬ್ಯಾಟಿಂಗ್​ ಪ್ರದರ್ಶನವೇ ಕಾರಣ. ಗೆಲುವಿನ ಎಲ್ಲ ಶ್ರೇಯ ಅವರಿಗೆ ಸಲ್ಲಬೇಕು. ಆಯುಷ್ ಬದೋನಿ ಕೂಡ ಉತ್ತಮ ಬ್ಯಾಟಿಂಗ್​ ನಡೆಸಿದರು. ಆರಂಭದಲ್ಲಿ ವಿಕೆಟ್​ ಕಳೆದುಕೊಂಡಾಗ ನನಗೂ ಚಿಂತೆ ಕಾಡಿತ್ತು. ಆದರೆ ಕೊನೆಯಲ್ಲಿ ಪಂದ್ಯ ಗೆದ್ದಾಗ ಇದನ್ನು ನಂಬಲು ಕೂಡ ಸಾಧ್ಯವಾಗಲಿಲ್ಲ. ಇದು ಚಿನ್ನಸ್ವಾಮಿ ಕ್ರೀಡಾಂಗಣ, ಕೊನೆಯ ಬಾಲ್​ನಲ್ಲಿ ಪಂದ್ಯವನ್ನು ಫಿನಿಶ್‌ ಮಾಡಲು ಸಾಧ್ಯವಾಗುವ ಏಕೈಕ ಸ್ಥಳ ಎಂಬುದಕ್ಕೆ ಇದೇ ಪಂದ್ಯ ಸಾಕ್ಷಿ. ನಾನು ಈ ಪಂದ್ಯದಲ್ಲಿ ಉತ್ತಮವಾಗಿ ಆಡಿಲ್ಲ ನಿಜ. ಆದರೆ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ರಾಹುಲ್​ ಹೇಳಿದರು.

ಇದನ್ನೂ ಓದಿ IPL 2023 : ಲಾಸ್ಟ್ ಬಾಲ್ ಥ್ರಿಲ್ಲರ್​ನಲ್ಲಿ ಆರ್​​ಸಿಬಿಗೆ ವೀರೋಚಿತ ಸೋಲು

ಬೃಹತ್‌ ಮೊತ್ತದ ಚೇಸಿಂಗ್‌ ವೇಳೆ ಲಕ್ನೋ ಆರಂಭದಲ್ಲೇ ಕೈಲ್‌ ಮೇಯರ್ ವಿಕೆಟ್‌ ಕಳೆದುಕೊಂಡಿತು. ಸಿರಾಜ್‌ ಈ ವಿಕೆಟ್​ ಕೆಡವಿ ಆರ್​ಸಿಬಿ ಮುನ್ನಡೆ ತಂದುಕೊಟ್ಟರು. ಇದರ ಬೆನಲ್ಲೇ ವೇಯ್ನ್​ ಪಾರ್ನೆಲ್‌ ಒಂದೇ ಓವರ್‌ನಲ್ಲಿ ದೀಪಕ್‌ ಹೂಡಾ ಮತ್ತು ಕೃಣಾಲ್‌ ಪಾಂಡ್ಯ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. 23ಕ್ಕೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಕ್ನೋಗೆ ಸ್ಟೋಯಿನಿಸ್‌ ಸ್ಫೋಟಕ ಬ್ಯಾಟಿಂಗ್​ ನಡೆಸಿ ಆಧರಿಸಿದರು. 30 ಎಸೆತಗಳಿಂದ 65 ರನ್‌ ಚಚ್ಚಿ ಗೆಲುವಿನ ವಿಶ್ವಾಸ ಮೂಡಿಸಿದರು. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ನಿಕೋಲಸ್‌ ಪೂರಣ್‌ ಕೇವಲ 15 ಎಸೆತಗಳಿಂದ ಅರ್ಧ ಶತಕ ಬಾರಿಸಿ ಸುಂಟರಗಾಳಿಯಾದರು. 19 ಎಸೆತಗಳಿಂದ 62 ರನ್‌ (4 ಬೌಂಡರಿ, 7 ಸಿಕ್ಸರ್‌) ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬದೋನಿ 30ರನ್​ ಕೊಡುಗೆ ನೀಡಿದರು.

Exit mobile version