ಚೆನ್ನೈ: “ಕ್ಯಾಪ್ಟನ್ ಕೂಲ್” ಎಂದೇ ಪ್ರಸಿದ್ದಿ ಪಡೆದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಭಾರತ ತಂಡಕ್ಕೆ ಹೇಗೆ ಮಹತ್ವದ ಕೊಡುಗೆ ನೀಡಿದ್ದಾರೋ, ಹಾಗೆ ಐಪಿಎಲ್ ಟೂರ್ನಿಯಲ್ಲಿಯೂ ಚೆನ್ನೈ ತಂಡದ ಯಶಸ್ವಿಗೆ ಅವರದ್ದು ಅಪಾರ ಶ್ರಮವಿದೆ. ನಾಯಕನಾಗಿ ತಂಡವನ್ನು 4 ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಅವರು ಇದೀಗ 5ನೇ ಬಾರಿಗೆ ತಂಡಕ್ಕೆ ಕಪ್ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ.
16ನೇ ಆವತ್ತಿಯ ಐಪಿಎಲ್ನಲ್ಲಿ ಗುಜರಾತ್ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆಯಿಟ್ಟಿರುವ ಚೆನ್ನೈ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. 10ನೇ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಕೂಡ ಈ ತಂಡದ್ದಾಗಿದೆ. ಈ ಸಾಧನೆಯ ಹಿಂದಿರುವ ಚಾಣಕ್ಯ ಯಾರೆಂದರೆ ಅದು ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲೊಬ್ಬರಾದ ಧೋನಿ. ಅದರಲ್ಲಿಯೂ ಈ ಬಾರಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವವಿಲ್ಲದ ಬೌಲರ್ಗಳನ್ನು ಹಿಡಿದುಕೊಂಡು ಅವರು ತಂಡವನ್ನು ಫೈನಲ್ಗೇರಿಸಿದ್ದು ಅವರ ನಾಯಕತ್ವದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನಾಲ್ಕು ಬಾರಿ ಚಾಂಪಿಯನ್, 5 ಬಾರಿ ರನ್ನರ್ ಅಪ್
ಚೆನ್ನೈ ತಂಡ ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಕೇವಲ ಎರಡು ಬಾರಿ ಮಾತ್ರ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿತ್ತು. ಎಲ್ಲ ಆವೃತ್ತಿಯಲ್ಲಿಯೂ ತಂಡ ಪ್ಲೇ ಆಫ್ ಪ್ರವೇಶ ಪಡೆದಿತ್ತು. ಅದರಲ್ಲಿ ಒಂದು ಬಾರಿ ಮಾತ್ರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಉಳಿದಂತೆ ಎಲ್ಲ ಆವೃತ್ತಿಯಲ್ಲಿಯೂ ಫೈನಲ್ಗೇರಿದ ಸಾಧನೆ ಮಾಡಿದೆ. ಒಟ್ಟು ನಾಲ್ಕು ಬಾರಿ ಚಾಂಪಿಯನ್ ಮತ್ತು 5 ಬಾರಿ ರನ್ನರ್ಅಪ್ ಸ್ಥಾನ ಪಡೆದ ಖ್ಯಾತಿ ಪಡೆದಿದೆ.
2 ವರ್ಷ ಅಮಾನತು ಶಿಕ್ಷೆ
2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಗುರುನಾಥನ್ ಮೇಯಪ್ಪನ್ ಬೆಟ್ಟಿಂಗ್ ನಡೆಸಿ ಸಿಕ್ಕಿಬಿದ್ದರು. ಇವರೊಂದಿಗೆ ಆಗಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಕೂಡ ಪೊಲೀಸ್ ಬಂಧನಕ್ಕೆ ಒಳಗಾಗಬೇಕಾಯಿತು. ಅಳಿಯ ಬೆಟ್ಟಿಂಗ್ ನಡೆಸಿದ್ದಕ್ಕೆ ಇವರ ಬಿಸಿಸಿಐ ಖುರ್ಚಿ ಕೂಡ ಜೋರಾಗಿ ಅಲುಗಾಡಿತು. 2015ರಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಆರ್.ಎಂ.ಲೋಧಾ ಸಮಿತಿ ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಕೊಂಡ ಚೆನ್ನೈ, ರಾಜಸ್ಥಾನ ರಾಯಲ್ಸ್ ತಂಡವನ್ನು ಅಮಾನತು ಮಾಡುವಂತೆ ನ್ಯಾಯಾಲಯಕ್ಕೆ ಶಿಫಾರಸು ಮಾಡಿದರು.
ಈ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ 2016 ಫೆಬ್ರವರಿಯಲ್ಲಿ ಎರಡೂ ತಂಡವನ್ನು 2 ವರ್ಷ ಐಪಿಎಲ್‌ನಿಂದ ಅಮಾನತು ಮಾಡಿತು. ಪರಿಣಾಮ, ಧೋನಿ ಸೇರಿದಂತೆ ತಂಡದಲ್ಲಿದ್ದ ಎಲ್ಲ ಆಟಗಾರರು ಬೇರೆ ನೂತನ ತಂಡವಾಗಿ ಕಾಣಿಸಿಕೊಂಡ ಗುಜರಾತ್ ಲಯನ್ಸ್ ಮತ್ತು ಪುಣೆ ತಂಡದ ಪರ ಆಡಿದರು.
ಇದನ್ನೂ ಓದಿ IPL 2023: ಸೂಪರ್ ಗೆಲುವಿನೊಂದಿಗೆ ಫೈನಲ್ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್
ಅಪ್ಪಂದಿರ ತಂಡ
2019ರಲ್ಲಿ 2 ವರ್ಷಗಳ ನಿಷೇಧ ಶಿಕ್ಷೆಯನ್ನು ಮುಗಿಸಿ ಮತ್ತೆ ಫೀಲ್ಡ್ಗಿಳಿದ ಚೆನ್ನೈ ತಂಡವನ್ನು ಅಪ್ಪಂದಿರ ತಂಡ ಎಂದು ಅವಮಾನಿಸಲಾಗಿತ್ತು. ಧೋನಿ ಸೇರಿ ತಂಡದಲ್ಲಿರುವ ಆಟಗಾರರಿಗೆಲ್ಲ ವಯಸ್ಸಾಗಿದೆ. ಇವರಿಂದ ಏನು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ಈ ಮಾತಿಗೆ ಹಿರಿಯರನ್ನೇ ಒಳಗೊಂಡ ಧೋನಿ ಪಡೆ ಸರಿಯಾಗಿಯೇ ತಿರುಗೇಟು ನೀಡಿತ್ತು. ಈ ಆವೃತ್ತಿಯಲ್ಲಿ ಕಪ್ ಎತ್ತಿ ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಮುಟ್ಟಿನೋಡುವಂತಹ ಏಟು ನೀಡಿತ್ತು. ತಂಡದ ಪ್ರದರ್ಶನ ಕಂಡು ಯುವ ಕ್ರಿಕೆಟಿಗರೇ ನಾಚುವಂತೆ ಆಗಿತ್ತು. ಈ ಆವೃತ್ತಿಯಲ್ಲಿಯೂ ಚೆನ್ನೈ ತಂಡವನ್ನು ಇದೇ ಮಾತುಗಳಿಂದ ಕಡೆಗಣಿಸಲಾಗುತ್ತಿದೆ. ಆದೆರ ಧೋನಿ ಅವರ ಮಾಸ್ಟರ್ ಪ್ಲ್ಯಾನ್ ಮುಂದೆ ಇದೆಲ್ಲ ನಡೆಯದು ಎಂಬುದಕ್ಕೆ ಈಗಾಗಲೇ ಹಲವು ಬಾರಿ ಉತ್ತರ ಸಿಕ್ಕಿದೆ.
ಧೋನಿಗೆ ವಯಸ್ಸಾಯಿತೆ?
ಧೋನಿಗೆ ವಯಸ್ಸಾಯಿತೇ ಎಂದು ಪ್ರಶ್ನಿಸುವವರು ಅನೇಕರಿದ್ದಾರೆ. ಹೀಗೆಲ್ಲ ಪ್ರಶ್ನಿಸುವವರು ಮೊದಲು ತಮ್ಮ ವಯಸ್ಸನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ವಯಸ್ಸಾಗಿದೆ ನಿಜ. ಆದರೆ, ಧೋನಿ ಎಲ್ಲಿಯೂ ಫೇಲ್ ಆಗಿಲ್ಲ. ಉತ್ತಮ ರನ್ ಸರಾಸರಿ ಹೊಂದಿದ್ದಾರೆ. ಚುರುಕಿನ ಕೀಪಿಂಗ್ ಮಾಡುತ್ತಿದ್ದಾರೆ. ಧೋನಿ ರಬ್ಬರ್ ಚೆಂಡು ಇದ್ದಂತೆ. ಗೋಡೆಗೆ ಎಷ್ಟು ವೇಗವಾಗಿ ಚೆಂಡನ್ನು ಹೊಡೆಯುತ್ತೀರೋ ಅದು ಅಷ್ಟೇ ವೇಗವಾಗಿ ವಾಪಸ್ ಮರಳಿ ಹಿಂದಕ್ಕೆ ಬರುತ್ತದೆ. ಹಾಗೇ ಧೋನಿ ಕೂಡ. ಭರ್ಜರಿ ಬ್ಯಾಟಿಂಗ್‌ನಿಂದಲೇ ಎಲ್ಲ ಟೀಕೆಗಳಿಗೂ ಉತ್ತರ ನೀಡುತ್ತಾರೆ. ಈ ಬಾರಿ ಮಂಡಿ ನೋವಿದ್ದರೂ ತಂಡದ ಗೆಲುವಿಗಾಗಿ ತಮ್ಮ ಸರ್ವಸ್ವ ಧಾರೆ ಎರೆದಂತೆ ಕಾಣುತ್ತಿದೆ. ಏಕೆಂದರೆ ಒಂದು ಪಂದ್ಯದಲ್ಲಿಯೂ ವಿಶ್ರಾಂತಿ ಪಡೆಯದೆ ಕಾಲಿಗೆ ಬ್ಯಾಡೆಂಡ್ ಕಟ್ಟಿಕೊಂಡು ಆಡುತ್ತಿದ್ದಾರೆ. ಅವರ ಈ ಸಾಹಸಕ್ಕೆ ಈ ಬಾರಿ ಕಪ್ ಒಲಿಯಲಿ ಎನ್ನುವುದು ಧೋನಿ ಮತ್ತು ಎಲ್ಲ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.
ಇದನ್ನೂ ಓದಿ IPL 2023: ನಿವೃತ್ತಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಧೋನಿ
ನಿವೃತ್ತಿ ವದಂತಿಗೆ ತರೆ ಎಳೆದ ಧೋನಿ
ಈ ಬಾರಿಯ ಐಪಿಎಲ್(IPL 2023) ಎಲ್ಲ ಆವೃತ್ತಿಗಳಿಗಿಂತಲೂ ಹೆಚ್ಚು ಕುತೂಹಲ ಮೂಡಿಸಿದ್ದು ಧೋನಿ ಅವರ ವಿದಾಯಕ ವಿಚಾರದಲ್ಲಿ, ಆದರೆ ಧೋನಿ ಅವರು ಈ ಮಾತನ್ನು ಇದೀಗ ಅಲ್ಲಗಳೆದಿದ್ದಾರೆ. ಗುಜರಾತ್ ವಿರುದ್ಧ ಗೆದ್ದು ಫೈನಲ್ ಪ್ರವೇಶ ಪಡೆದ ಬಳಿಕ ಮಾತನಾಡಿದ ಧೋನಿ “ನಿವೃತ್ತಿ ಬಗ್ಗೆ ನನಗೆ ಗೊತ್ತಿಲ್ಲ. ಇದರ ಬಗ್ಗೆ ನಾನು ಈಗ ಚಿಂತಿಸುವುದಿಲ್ಲ. ಸದ್ಯ ನನ್ನ ಮುಂದಿರುವ ಗುರಿ ಫೈನಲ್ಗೆ ಬೇಕಾದ ತಯಾರಿ ಮತ್ತು ಕಪ್ ಗೆಲ್ಲುವುದು. ನಿವೃತ್ತಿ ಬಗ್ಗೆ ಯೋಚಿಸಲು ನನಗೆ ಇನ್ನೂ 8 ರಿಂದ 9 ತಿಂಗಳು ಅವಕಾಶವಿದೆ. ಹೀಗಾಗಿ ಈಗ ಏಕೆ ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು? ಆಟಗಾರನಾಗಿ ಅಥವಾ ಬೇರೆ ಜವಾಬ್ದಾರಿಯ ಮೂಲಕವಾದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜತೆಗಿನ ನಂಟು ಯವಾಗಲೂ ಇದ್ದೇ ಇರುತ್ತದೆ” ಎಂದು ಧೋನಿ ಹೇಳಿದ್ದಾರೆ.