ಮುಂಬಯಿ: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್ ಬೌಲರ್, ನ್ಯೂಜಿಲ್ಯಾಂಡ್ನ ಕೈಲ್ ಜಾಮೀಸನ್(kyle jamieson) ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ಬಾರಿ ಆರ್ಸಿಬಿ ಪರ ಆಡಿದ್ದ ಕೈಲ್ ಜಾಮೀಸನ್ ಅವರನ್ನು ಈ ಬಾರಿ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 1 ಕೋಟಿ ರೂ. ನೀಡಿ ಖರೀದಿಸಿತು. ಇದೀಗ ಅವರು ಗಾಯಗೊಂಡಿರುವ ಕಾರಣ ತಂಡಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಗಂಭೀರವಾಗಿ ಗಾಯಗೊಂಡಿರುವ ಜಾಮೀಸನ್ ತಂಡದಿಂದ ಹೊರಗುಳಿದಿದ್ದಾರೆ. ಇದೇ ಕಾರಣದಿಂದಾಗಿ ಅವರು ಐಪಿಎಲ್ಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಕಳೆದ ಜೂನ್ ತಿಂಗಳಲ್ಲಿ ಗಾಯಗೊಂಡಿದ್ದ ಜಾಮೀಸನ್ ಇತ್ತೀಚೆಗಷ್ಟೇ ತಂಡಕ್ಕೆ ಮರಳಿದ್ದರು.
ಇದನ್ನೂ ಓದಿ IPL 2023 | ಮತ್ತೆ ಕನ್ನಡಿಗನಿಗೇ ಕೋಚಿಂಗ್ ಪಟ್ಟ ಕಟ್ಟಿದ ಐಪಿಎಲ್ನ ಪಂಜಾಬ್ ಕಿಂಗ್ಸ್ ತಂಡ!
ಇದೀಗ ಮತ್ತೆ ಪಾದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಸ್ಕ್ಯಾನಿಂಗ್ ವೇಳೆ ಪಾದದ ಮೂಳೆಯು ಮುರಿತಕ್ಕೊಳಗಾಗಿರುವುದು ಕಂಡು ಬಂದಿದೆ. ಹೀಗಾಗಿ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಜತೆಗೆ ಐಪಿಎಲ್ಗೂ ಅನುಮಾನ ಎಂದು ತಿಳಿದು ಬಂದಿದ್ದು, ಸದ್ಯದಲ್ಲೇ ಅವರ ಬದಲಿಗೆ ಬೇರೆ ಆಟಗಾರನನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿದುಬಂದಿದೆ.