Site icon Vistara News

IPL 2023: ಮೈದಾನಕ್ಕೆ ಓಡಿ ಬಂದು ಧೋನಿಯನ್ನು ಅಪ್ಪಿಕೊಂಡ ಮಗಳು ಝೀವಾ; ವಿಡಿಯೊ ವೈರಲ್​

MA Chidambaram Stadium At Chennai

ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಬುಧವಾರ ನಡೆದ ಐಪಿಎಲ್(IPL 2023)​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 27 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಚೆನ್ನೈ 15 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಪಂದ್ಯ ಗೆದ್ದ ಬಳಿಕ ಎಂ.ಎಸ್​. ಧೋನಿ ಅವರ ಮಗಳು ಝೀವಾ ಮೈದಾನಕ್ಕೆ ಓಡಿ ಬಂದು ತಂದೆಯನ್ನು ಅಪ್ಪಿಕೊಂಡ ವಿಡಿಯೊ ಇದೀಗ ವೈರಲ್​ ಆಗಿದೆ.

ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 167 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು 140 ರನ್​ ಗಳಿಸಿ ಶರಣಾಯಿತು.

ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ಅಂತಿಮ ಕ್ಷಣದಲ್ಲಿ ಧೋನಿ ಮತ್ತು ಜಡೇಜಾ ಸೇರಿಕೊಂಡು ನಡೆಸಿದ ಹೋರಾಟದ ಪರಿಣಾಮ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಧೋನಿ ಅವರು ಕೇವಲ 9 ಎಸೆತಗಳ ಮುಂದೆ 20 ರನ್​ ಸಿಡಿಸಿದರು. ಈ ಇನಿಂಗ್ಸ್​ನಲ್ಲಿ ಎರಡು ಸಿಕ್ಸರ್​ ಮತ್ತು ಒಂದು ಬೌಂಡರಿ ದಾಖಲಾಯಿತು. ತಂದೆಯ ಬ್ಯಾಟಿಂಗ್​ ಕಂಡು ಗ್ಯಾಲರಿಯಲ್ಲಿ ಕುಳಿತ್ತಿದ್ದ ಝೀವಾ ಸಂಭ್ರಮಿಸುತ್ತಿದ್ದಳು.

ಇದನ್ನೂ ಓದಿ IPL 2023: ಡೆಲ್ಲಿಗೆ ಸೋಲಿನ ಶಾಕ್; ಪ್ಲೇ ಆಫ್​ ಸನಿಹಕ್ಕೆ ಚೆನ್ನೈ ಸೂಪರ್​ ಕಿಂಗ್ಸ್​

ಪಂದ್ಯದುದ್ದಕ್ಕೂ ತಂದೆಗೆ ಬೆಂಬಲ ಸೂಚಿಸುತ್ತಿದ್ದ ಝೀವಾ, ಪಂದ್ಯ ಗೆದ್ದ ಬಳಿಕ ಮೈದಾನಕ್ಕೆ ಓಡಿ ಬಂದು ತಂದೆಯನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾಳೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ನು ಈ ವಿಡಿಯೊ ಕಂಡ ಹಲವು ನೆಟ್ಟಿಗರು ತಂದೆಗೆ ತಕ್ಕ ಮಗಳು ಎಂದು ಕಾಮೆಂಟ್​ ಮಾಡಿದ್ದಾರೆ.

ಪಂದ್ಯ ವೀಕ್ಷಿಸಿದ್ದ ಬೊಮ್ಮನ್-ಬೆಳ್ಳಿ ದಂಪತಿ

ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್‌ʼ (The Elephant Whisperers)ನಲ್ಲಿ ನಟಿಸಿದ ಸ್ಥಳೀಯ ದಂಪತಿ ಬೊಮ್ಮನ್(Bomman) ಮತ್ತು ಬೆಳ್ಳಿ(Bellie) ಅವರು ಈ ಪಂದ್ಯಕ್ಕೆ ಸಾಕ್ಷಿಯಾದ್ದರು. ಜತೆಗೆ ಈ ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಕೂಡ ಉಪಸ್ಥಿತರಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಈ ಮೂವರು ಅತಿಥಿಗಳಿಗೆ ಚೆನ್ನೈ ಸೂಪರ್​ ಕಿಂಗ್ಸ್​ ಪರವಾಗಿ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ತಂಡದ ಜೆರ್ಸಿಯನ್ನು ನೀಡಿ ಗೌರವಿಸಿದರು. ಸ್ಮರಣಿಕೆ ನೀಡಿದ ಬಳಿಕ ಧೋನಿ ಕೆಲ ಕಾಲ ಈ ದಂಪತಿಗಳೊಂದಿಗೆ ಕುಶಲೋಪರಿ ನಡೆಸಿದರು.

Exit mobile version