ಗುವಾಹಟಿ: ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ ಶನಿವಾರ ನಡೆದ ಐಪಿಎಲ್(IPL 2023) ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) 57 ರನ್ಗಳ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರು ನೂತನ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಜತೆಗೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆದ ಶನಿವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್(60) ಮತ್ತು ಜಾಸ್ ಬಟ್ಲರ್(79) ಅವರ ಸೊಗಸಾದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಜವಾಬಿತ್ತ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪಾಲಿನ ಆಟದಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ 26 ರನ್ಗಳಿಸಿದ ವೇಳೆ ಐಪಿಎಲ್ ಟೂರ್ನಿಯಲ್ಲಿ 6 ಸಾವಿರ ರನ್ ಪೂರೈಸಿದ ಮೂರನೇ ಬ್ಯಾಟರ್ ಎನಿಸಿದರು. ಜತೆಗೆ ಅತಿ ವೇಗವಾಗಿ (165 ಇನಿಂಗ್ಸ್)ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿದರು. ಈ ಸಾಧನೆ ಮಾಡಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೂ ಭಾಜನರಾದರು. ವಿರಾಟ್ ಕೊಹ್ಲಿ (188) ಮತ್ತು ಶಿಖರ್ ಧವನ್ (199) ಇನಿಂಗ್ಸ್ನಲ್ಲಿ 6 ಸಾವಿರ ರನ್ ಪೂರೈಸಿದ ಮೊದಲ ಸಾಧಕರು.
ಕಡಿಮೆ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡುವ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಇದೀಗ ವಾರ್ನರ್ ಮುರಿದಿದ್ದಾರೆ. ಕೊಹ್ಲಿ 188 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿ ಅಗ್ರ ಸ್ಥಾನದಲ್ಲಿದ್ದರು. ಆದರೆ ವಾರ್ನರ್ ಕೇವಲ 165 ಇನಿಂಗ್ಸ್ ಇನಿಂಗ್ಸ್ನಲ್ಲಿ ಈ ಗುರಿ ತಲುಪಿ ನೂತನ ದಾಖಲೆ ಬರೆದಿದ್ದಾರೆ.
ಇದನ್ನು ಓದಿ IPL 2023: ಅಜಿಂಕ್ಯ ರಹಾನೆ ಬ್ಯಾಟಿಂಗ್ ಆರ್ಭಟಕ್ಕೆ ತಲೆಬಾಗಿದ ಮುಂಬೈ ಇಂಡಿಯನ್ಸ್
ಏಕಾಂಗಿ ಹೋರಾಟ ನಡೆಸಿದ್ದ ವಾರ್ನರ್
ನಂಬುಗೆಯ ಬ್ಯಾಟರ್ಗಳೆಲ್ಲ ಕೈ ಕೊಟ್ಟರೂ ನಾಯಕ ಡೇವಿಡ್ ವಾರ್ನರ್ ಏಕಾಂಗಿಯಾಗಿ ಹೋರಾಟ ನಡೆಸಿ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದ್ದರು. ಆದರೆ ಇವರಿಗೆ ಯಾರೂ ಕೂಡ ಸರಿಯಾದ ಸಾಥ್ ನೀಡದ ಪರಿಣಾಮ ತಂಡ ಸೋಲು ಕಂಡಿತು. ಅಕ್ಷರ್ ಪಟೇಲ್, ರೋಮನ್ ಪೋವೆಲ್ ಕೇವಲ ಒಂದಂಕಿಗೆ ಆಟ ಮುಗಿಸಿದರು. 19 ಓವರ್ ತನಕ ಹೋರಾಡಿದ ವಾರ್ನರ್ 65 ರನ್ ಗಳಿಸಿ ಚಹಲ್ ಅವರ ಅಂತಿಮ ಎಸೆತಕ್ಕೆ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ವಾರ್ನರ್ ತಮ್ಮ ಅರ್ಧಶತಕದ ಇನಿಂಗ್ಸ್ನಲ್ಲಿ 7 ಬೌಂಡರಿ ಬಾರಿಸಿದರು. ರಾಜಸ್ಥಾನ್ ಪರ ಬೌಲ್ಟ್ ನಾಲ್ಕು ಓವರ್ ಎಸೆದು 29 ರನ್ಗೆ ಮೂರು ವಿಕೆಟ್ ಕಿತ್ತರು. ಇದರಲ್ಲಿ ಒಂದು ಓವರ್ ಮೇಡನ್ ಆಗಿತ್ತು. ಯಜುವೇಂದ್ರ ಚಹಲ್ ಮೂರು ವಿಕೆಟ್, ಆರ್ ಅಶ್ವಿನ್ 25 ರನ್ಗೆ 2 ವಿಕೆಟ್ ಪಡೆದರು.