Site icon Vistara News

IPL 2023: ಪ್ಲೇ ಆಫ್​ ಕನಸು ಕಂಡಿದ್ದ ಪಂಜಾಬ್​ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್​

Himachal Pradesh Cricket Association Stadium At Dharamsala

ಧರ್ಮಶಾಲಾ: ಯುದ್ಧ ಮುಗಿದ ಮೇಲೆ ಕೋಟೆ ಬಾಗಿಲು ಹಾಕಿದರಂತೆ ಎಂಬ ನಾಣ್ಣುಡಿಯಂತೆ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದ ಬಳಿಕ ಅದ್ಭುತ ಪ್ರದರ್ಶನ ತೋರಿದೆ. ಪಂಜಾಬ್​ ಕಿಂಗ್ಸ್​ ವಿರುದ್ಧದ ಬುಧವಾರದ ಪಂದ್ಯದಲ್ಲಿ 15 ರನ್​ಗಳ ಗೆಲುವು ದಾಖಲಿಸಿದೆ. ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋಲು ಕಂಡ ಧವನ್​ ಪಡೆ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.

ದಶಕದ ಬಳಿಕ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಲೀ ರೊಸೊ(82* ), ಪೃಥ್ವಿ ಶಾ(54) ಮತ್ತು ಡೇವಿಡ್​ ವಾರ್ನರ್​(46) ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ಗೆ 213 ರನ್​ ಗಳಿಸಿತು. ಜವಾಬಿತ್ತ ಪಂಜಾಬ್​ ಶಕ್ತಿ ಮೀರಿ ಪ್ರಯತ್ನಿಸಿದರೂ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು 198 ರನ್​ ಗಳಿಸಲಷ್ಟೇ ಶಕ್ತವಾಯಿತು.

ದೊಡ್ಡ ಮೊತ್ತವನ್ನು ಬೆನ್ನಟುವ ವೇಳೆ ಪಂಜಾಬ್​ಗೆ ಮೊದಲ ಎಸೆತದಲ್ಲೇ ಆಘಾತ ಎದುರಾಯಿತು. ಇಶಾಂತ್​ ಶರ್ಮ ಅವರ ಮೊದಲ ಎಸೆತದಲ್ಲೇ ಧವನ್​ ಗೋಲ್ಡನ್​ ಡಕ್​ ಆದರು. ತಂಡ ಖಾತೆ ತೆರೆಯುವ ಮುನ್ನವೇ ಪ್ರಮುಖ ವಿಕೆಟ್​ ಕಳೆದುಕೊಂಡು ಪಂಜಾಬ್​ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ಅಥರ್ವ ಥೈಡೆ 55 ರನ್​ ಗಳಿಸಿ ಔಟಾದರು.

ತಂಡ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಬ್ಯಾಟ್​ ಹಿಡಿದು ಬಂದ ಲಿಯಾಂಮ್​​ ಲಿವಿಂಗ್​ಸ್ಟೋನ್​ ಅವರು ಏಕಾಂಗಿಯಾಗಿ ಹೋರಾಟ ನಡೆಸಿ ಒಂದು ಹಂತದಲ್ಲಿ ಪಂಜಾಬ್​ಗೆ ಗೆಲುವು ತಂದು ಕೊಡುವ ವಿಶ್ವಾಸವೊಂದನ್ನು ಮೂಡಿಸಿದರು. ಆದರೆ ಅವರಿಗೆ ಮತ್ತೊಂದು ತುದಿಯಲ್ಲಿ ಯಾರಿಂದಲೂ ಉತ್ತಮ ಸಾಥ್​ ಸಿಗದ ಕಾರಣ ತಂಡ ಸಣ್ಣ ಅಂತರದಿಂದ ಸೋಲು ಕಂಡಿತು. ಅಂತಿಮ ಹಂತದವರೆಗೂ ಬ್ಯಾಟಿಂಗ್​ ನಡೆಸಿದ ಲಿವಿಂಗ್​ಸ್ಟೋನ್​ 48 ಎಸೆತಗಳಲ್ಲಿ 94 ರನ್​ ಗಳಿಸಿ ಔಟಾದರು. ಅವರ ಈ ವಿಸ್ಫೋಟಕ ಇನಿಂಗ್ಸ್​ನಲ್ಲಿ ಬರೋಬ್ಬರಿ 9 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಯಿತು. ಡೆಲ್ಲಿ ಪರ ಅನ್ರಿಚ್​ ನೋರ್ಜೆ 2 ವಿಕೆಟ್​ ಪಡೆದರು. ಈ ಪಂದ್ಯದಲ್ಲಿ ಡೆಲ್ಲಿ ಒಟ್ಟು 5 ಕ್ಯಾಚ್​ಗಳನ್ನು ಕೈಚೆಲ್ಲಿತು.

ಇದನ್ನೂ ಓದಿ IPL 2023: ವಧೇರಾಗೆ ವಿಚಿತ್ರ ಶಿಕ್ಷೆ ನೀಡಿದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

ವಾರ್ನರ್​-ಪೃಥ್ವಿ ಶಾ ಉತ್ತಮ ಜತೆಯಾಟ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಡೆಲ್ಲಿ ಆರಂಭಿಕ ಎರಡು ಓವರ್​ನಲ್ಲಿ ರಕ್ಷಣಾತ್ಮಕ ಆಟವಾಡಿತು. 2 ಓವರ್​ಗೆ ಕೇವಲ 6 ರನ್​ ಮಾತ್ರ ಒಟ್ಟುಗೂಡಿತು. ಈ ರನ್​ ಗಮನಿಸುವಾಗ ಡೆಲ್ಲಿ ಈ ಪಂದ್ಯದಲ್ಲಿಯೂ ಅಲ್ಪ ಮೊತ್ತ ದಾಖಲಿಸಲಿದೆ ಎಂದು ಊಹಿಸಲಾಯಿತು. ಆದರೆ ಮುಂದಿನ ಓವರ್​ನಿಂದ ಜಿದ್ದಿಗೆ ಬಿದ್ದವರಂತೆ ಬಿರುಸಿನ ಬ್ಯಾಟಿಂಗ್​ ನಡೆಸಿದ ವಾರ್ನರ್​ ಮತ್ತು ಪೃಥ್ವಿ ಶಾ ಪಂಜಾಬ್​ ಬೌಲರ್​ಗಳಿಗೆ ಸತತ ಸಿಕ್ಸರ್​ ಮತ್ತು ಬೌಂಡರಿ ರುಚಿ ತೋರಿಸಲಾರಂಭಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದಿಂದ ರನ್​ ವೇಗ ಹಠಾತ್​ 10ರ ಸರಾಸರಿಯಲ್ಲಿ ಸಾಗಿ 7 ಓವರ್​ಗೆ 70 ರನ್​ಗಳ ಗಡಿ ದಾಟಿತು.

ಬಿರುಸಿನ ಬ್ಯಾಟಿಂಗ್​ ನೆಡೆಸುತ್ತಿದ್ದ ವಾರ್ನರ್​ ಅವರು 41 ರನ್​ ಗಳಿಸಿದ್ದ ವೇಳೆ ರಾಹುಲ್​ ಚಹರ್​ ಅವರಿಂದ ಜೀವದಾನ ಪಡೆದರು. ಆದರೆ ಈ ಅವಕಾಶವನ್ನು ಅವರು ಹೆಚ್ಚು ಕಾಲ ಬಳಸಿಕೊಳ್ಳುವಲ್ಲಿ ವಿಫಲರಾದರು. ಮುಂದಿನ 5 ರನ್​ ಅಂತರದಲ್ಲಿ ಅವರು ವಿಕೆಟ್​ ಕೈ ಚೆಲ್ಲಿದರು. ಅಸಾಧ್ಯವಾದ ಕ್ಯಾಚ್​ ಒಂದನ್ನು ಚಿರತೆ ವೇಗದಲ್ಲಿ ಓಡಿ ಕ್ಯಾಚ್​ ಹಿಡಿಯುವ ಮೂಲಕ ಶಿಖರ್​ ಧವನ್​ ಅವರು ವಾರ್ನರ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ವಾರ್ನರ್​ ಮತ್ತು ಪೃಥ್ವಿ ಶಾ ಮೊದಲ ವಿಕೆಟ್​ಗೆ 94 ರನ್​ ರಾಶಿ ಹಾಕಿದರು. ವಾರ್ನರ್​ ಗಳಿಕೆ 46 ರನ್​

ಅರ್ಧಶತಕ ಬಾರಿಸಿದ ಪೃಥ್ವಿ ಶಾ

ಆರಂಭಿಕ ಪಂದ್ಯಗಳಲ್ಲಿ ಸತತ ಸೊನ್ನೆ ಸುತ್ತಿ ಬಳಿಕ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದರೂ ಬ್ಯಾಟಿಂಗ್​ ವೈಫಲ್ಯ ಕಂಡು ಬಾರಿ ಟೀಕೆಗೆ ಗುರಿಯಾಗಿದ್ದ ಪೃಥ್ವಿ ಶಾ, ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ತಮ್ಮ ಹಳೇಯ ಬ್ಯಾಟಿಂಗ್​ ಶೈಲಿಯಲ್ಲೇ ಬ್ಯಾಟ್​ ಬೀಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 54 ರನ್​ ಗಳಿಸಿದರು. ಇದರ ಮಧ್ಯೆ ಅವರು ಎರಡು ಬಾರಿ ಕೈ ಬೆರಳಿನ ಗಾಯಕ್ಕೂ ತುತ್ತಾದರು. ಇದು ಪೃಥ್ವಿ ಶಾ ಅವರು ಈ ಆವೃತ್ತಿಯ ಐಪಿಎಲ್​ನಲ್ಲಿ ಬಾರಿಸಿದ ಮೊದಲ ಅರ್ಧಶತಕ ಮತ್ತು ಗರಿಷ್ಠ ಮೊತ್ತವಾಗಿದೆ. ವಾರ್ನರ್​ ಜತೆ ಉತ್ತಮ ಇನಿಂಗ್ಸ್​ ಕಟ್ಟಿದ ಅವರು ಆ ಬಳಿಕ ದ್ವಿತೀಯ ವಿಕೆಟ್​ಗೆ ರೂಸೊ ಜತೆ ಸೇರಿ 54 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು.

ವಾರ್ನರ್​ ವಿಕೆಟ್​ ಪತನದ ಬಳಿಕ ಬ್ಯಾಟ್​ ಹಿಡಿದು ಬಂದ ದಕ್ಷಿಣ ಆಫ್ರಿಕಾದ ದೈತ್ಯ ಬ್ಯಾಟರ್​ ರಿಲೀ ರೂಸೊ ಅವರು ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಯುವರಾಜ್​ ಸಿಂಗ್​ ಶೈಲಿಯಲ್ಲಿ ಬ್ಯಾಟಿಂಗ್​ ನಡೆಸಿ ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಡೆಲ್ಲಿ ಆಟಗಾರರ ಆಟವನ್ನು ಗಮನಿಸುತ್ತಿದ್ದ ಕೋಚ್​ ರಿಕಿ ಪಾಂಟಿಂಗ್​ ಮತ್ತು ತಂಡದ ನಿರ್ದೇಶಕ ಸೌರವ್​ ಗಂಗೂಲಿ ಅವರು ಈ ಪ್ರದರ್ಶನವನ್ನು ಆರಂಭದಲ್ಲೇ ತೋರಿಸುತ್ತಿದ್ದರೆ ನಾವು ಕೂಡ ಪ್ಲೇ ಆಫ್​ ರೇಸ್​ನಲ್ಲಿರಬಹುದಿತ್ತು ಎನ್ನುವ ಅರ್ಥದಲ್ಲಿ ಸಂಭಾಷಣೆ ನಡೆಸುತ್ತಿರುವುದು ಕಂಡು ಬಂತು.

ಇದನ್ನೂ ಓದಿ IPL 2023: ಕೇಶವಿನ್ಯಾಸದಲ್ಲಿ ಅರಳಿದ ಆರ್​ಸಿಬಿ, ವಿರಾಟ್​ ಕೊಹ್ಲಿ ಚಿತ್ರ

ಒಟ್ಟು 37 ಎಸೆತ ಎದುರಿಸಿದ ರೂಸೊ ಅವರು ತಲಾ 6 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ ಅಜೇಯ 82 ರನ್​ ಗಳಿಸಿದರು. ಅಂತಿಮ ಹಂತದಲ್ಲಿ ಫಿಲಿಪ್​ ಸಾಲ್ಟ್​ ಕೂಡ ಅಬ್ಬರ ಬ್ಯಾಟಿಂಗ್​ ನಡೆಸಿ 14 ಎಸೆತಗಳ ಮುಂದೆ ಅಜೇಯ 26 ರನ್​ ಬಾರಿಸಿದರು. ಪಂಜಾಬ್​ ಪರ ಸ್ಯಾಮ್​ ಕರನ್​ 2 ವಿಕೆಟ್​ ಕೆಡವಿದರು.

Exit mobile version