ಹೈದರಾಬಾದ್: ಸತತ 5 ಸೋಲಿನ ಬಳಿಕ ಆರನೇ ಪ್ರಯತ್ನದಲ್ಲಿ ಗೆಲುವಿನ ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್ ಸೋಮವಾರದ ಐಪಿಎಲ್ನಲ್ಲಿ(IPL 2023) ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ಅದೃಷ್ಟದ ವಿಚಾರದಲ್ಲಿ ಎರಡು ತಂಡಗಳು ಬಹುತೇಕ ಒಂದೇ ದೋಣಿಯ ಪಯಣಿಗರೆಂಬುದನ್ನು ಮರೆಯುವಂತಿಲ್ಲ. ತಂಡದಲ್ಲಿ ವಿಶ್ವ ದರ್ಜೆಯ ಆಟಗಾರರಿದ್ದರೂ ಗೆಲವು ಮಾತ್ರ ಈ ತಂಡಗಳಿಗೆ ದೂರವೇ ಉಳಿದಿದೆ.
ಡೆಲ್ಲಿ ತಂಡ ಆಡಿದ 6 ಪಂದ್ಯಗಳಲ್ಲಿಯೂ ನಾಯಕ ಡೇವಿಡ್ ವಾರ್ನರ್ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ವಾರ್ನರ್ ಅವರದ್ದು ಏಕಾಂಗಿ ಹೋರಾಟ. ಕೋಟಿ ವೀರ ಮಿಚೆಲ್ ಮಾರ್ಷ್ ಅವರು ಇದುವರೆಗೂ ಎರಡಂಕಿ ಮೊತ್ತ ಕಲೆಹಾಕಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಪೃಥ್ವಿ ಶಾ ಅವರು ಇನ್ನೂ ಇಂಪ್ಯಾಕ್ಟ್ ತೋರಿಲ್ಲ. ಡೆಲ್ಲಿ ತಂಡದ ಬೌಲಿಂಗ್ ವಿಭಾಗ ಕೊಂಚ ಮಟ್ಟಿಗೆ ಅಡ್ಡಿಯಿಲ್ಲ. ಅನ್ರಿಚ್ ನೋರ್ಜೆ, ಇಶಾಂತ್ ಶರ್ಮ, ಕುಲ್ದೀಪ್ ಯಾದವ್ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.
ಹೈದರಾಬಾದ್ ತಂಡ ಆರಂಭದಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ತೋರಿದರೂ ಬಳಿಕ ನಾಟಕೀಯ ಕುಸಿತ ಕಂಡು ಸೋಲು ಕಾಣುತ್ತಿದೆ. ಇನ್ನೇನು ಗೆಲುವಿನಂಚಿನ ತನಕ ಸಾಗಿ ಆ ಬಳಿಕ ಹಿಡಿತ ಕಳೆದುಕೊಳ್ಳುತ್ತಿದೆ. ಈ ಪ್ರದರ್ಶನವೇ ತಂಡದಕ್ಕೆ ಮುಳುವಾಗುತ್ತಿದೆ.
ಪಿಚ್ ರಿಪೋರ್ಟ್
ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ಗೆ ಸಮತೋಲಿತ ನೆರವು ನೀಡಲಿದೆ. ಇನಿಂಗ್ಸ್ನ ಆರಂಭದಲ್ಲಿ ಇಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಬಹುದು. ಬಳಿಕ ನಿಧಾನಗತಿಯಲ್ಲಿ ಬೌಲಿಂಗ್ ಟ್ರ್ಯಾಕ್ ಆಗಿ ಪರಿವರ್ತನೆಗೊಳ್ಳಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ನಡೆಸುವ ಸಾಧ್ಯತೆ ಹೆಚ್ಚು.
ಸಂಭಾವ್ಯ ತಂಡ
ಸನ್‌ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಅಭಿಷೇಕ್ ಶರ್ಮಾ/ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಕುಲದೀಪ್ ಯಾದವ್, ಅನ್ರಿಚ್ ನೋರ್ಜೆ, ಇಶಾಂತ್ ಶರ್ಮಾ, ಮುಖೇಶ್ ಕುಮಾರ್.