Site icon Vistara News

IPL 2023: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​; ಆರ್​ಸಿಬಿ ಎದುರಾಳಿ

IPL 2023: Delhi Capitals eyeing first win; RCB opponent

IPL 2023: Delhi Capitals eyeing first win; RCB opponent

ಬೆಂಗಳೂರು: ಮುಂಬೈ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಬೀಗಿದ್ದ ಆರ್​ಸಿಬಿ ಆ ಬಳಿಕ ಸತತ ಸೋಲಿನಿಂದ ಕಂಗೆಟ್ಟಿದೆ. ಇದೀಗ ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ಇಂದು(ಶನಿವಾರ) ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಡೆಲ್ಲಿ ಪಾಲಿಗೂ ಈ ಪಂದ್ಯ ಮಹತ್ವದ್ದಾಗಿದೆ. ಏಕೆಂದರೆ ಡೆಲ್ಲಿ ಇದುವರೆಗೂ ಖಾತೆ ತೆರೆದಿಲ್ಲ.

ಡೆಲ್ಲಿಯ ಸತತ ಸೋಲಿಗೆ ಬ್ಯಾಟಿಂಗ್‌ ಬರಗಾಲವೇ ಮುಖ್ಯ ಕಾರಣ. ಇಲ್ಲಿ ನಾಯಕ ಡೇವಿಡ್‌ ವಾರ್ನರ್‌ ಮತ್ತು ಅಕ್ಷರ್‌ ಪಟೇಲ್‌ ಮಾತ್ರ ರನ್​ ಗಳಿಸುತ್ತಿದ್ದಾರೆ. ಉಳಿದ ಆಟಗಾರರಾದ ಪೃಥ್ವಿ ಶಾ, ಮನೀಷ್‌ ಪಾಂಡೆ, ಯಶ್‌ ಧುಲ್‌, ರೋಮ್​ವನ್​ ಪೊವೆಲ್‌, ಲಲಿತ್‌ ಯಾದವ್‌ ಅವರ ಸತತ ವೈಫ‌ಲ್ಯ ತಂಡಕ್ಕೆ ಮುಳುವಾಗಿದೆ. ಸದ್ಯ ಬೌಲಿಂಗ್​ ವಿಭಾಗದಲ್ಲಿ ಡೆಲ್ಲಿ ಬಲಿಷ್ಠವಾಗಿದೆ. ಸಣ್ಣ ಮೊತ್ತವನ್ನು ಪೇರಿಸಿದರೂ, ಎದುರಾಳಿ ತಂಡ ಗೆಲುವು ಸಾಧಿಸಲು ಪಂದ್ಯದ ಕೊನೆಯ ಓವರ್ ತನಕ ಹೋರಾಟ ನಡೆಸುತ್ತಿರುವುದು ಇದಕ್ಕೆ ಉತ್ತಮ ಸಾಕ್ಷಿ. ಅನ್ರಿಚ್​ ನೋರ್ಜೆ, ಮುಕೇಶ್‌ ಕುಮಾರ್‌, ಕುಲ್​ದೀಪ್‌, ಅಕ್ಷರ್‌ ಪಟೇಲ್‌ ಉತ್ತಮ ಬೌಲಿಂಗ್​ ಲಯದಲ್ಲಿದ್ದಾರೆ.

ಆರ್​ಸಿಬಿ ಈ ವಿಚಾರದಲ್ಲಿ ತದ್ವಿರುದ್ಧ, ವಿರಾಟ್​ ಕೊಹ್ಲಿ, ನಾಯಕ ಫಾಫ್​ ಡು ಪ್ಲೆಸಿಸ್​, ಮ್ಯಾಕ್ಸ್​ವೆಲ್​ ದೊಡ್ಡ ಮೊತ್ತ ಪೇರಿಸುವಲ್ಲಿ ಸಮರ್ಥರಿದ್ದಾರೆ. ಆದರೆ ಬೌಲರ್​ಗಳಿಗೆ ಇದನ್ನೂ ಉಳಿಸಿಕೊಳ್ಳಲು ಸಾಧ್ಯವಾಗದಿರುವುದೇ ತಂಡದ ಸೋಲಿಗೆ ಪ್ರಮುಖ ಕಾರಣ. ಯಜುವೇಂದ್ರ ಚಹಲ್​ ಅವರು ಆರ್​ಸಿಬಿ ತಂಡದಿಂದ ಬೇರ್ಪಟ್ಟ ಬಳಿಕ ತಂಡದಲ್ಲಿ ಓರ್ವ ಅನುಭವಿ ಸ್ಪಿನ್ನರ್​ ಕೊರತೆ ಎದ್ದು ಕಾಣುತ್ತಿದೆ. ಹಸರಂಗ ಅವರು ತಂಡದಲ್ಲಿದ್ದರೂ ಕಳೆದ 2 ಆವೃತ್ತಿಯಲ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನ ತೋರಿಲ್ಲ. ವಿಕೆಟ್​ ಕಿತ್ತರೂ ದುಬಾರಿಯಾಗಿ ಪರಿಣಮಿಸುತ್ತಿದ್ದಾರೆ. ಸದ್ಯ ಸಿರಾಜ್​ ಅವರನ್ನು ಬಿಟ್ಟರೆ ಉಳಿದ ಯಾವುದೇ ಬೌಲರ್​ಗಳು ಕೂಡ ನಿರೀಕ್ಷಿತ ಮಟ್ಟದ ಬೌಲಿಂಗ್​ ನಡೆಸಿಲ್ಲ.

ಪಿಚ್​ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ಗೆ ಹೇಳಿ ಮಾಡಿಸಿದಂತೆ. ಇದು​ ಸಂಪೂರ್ಣ ಬ್ಯಾಟಿಂಗ್​​ ಸ್ನೇಹಿ ಪಿಚ್​ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಇಲ್ಲಿ ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿರುವ ಕಾರಣ ಬ್ಯಾಟರ್​ಗಳು ಯಾವುದೇ ಒತ್ತಡವಿಲ್ಲದೆ ಬ್ಯಾಟ್​ ಬೀಸಬಹುದಾಗಿದೆ. ಆದರೆ ಬೌಲರ್​ಗಳು ಮಾತ್ರ ಶಕ್ತಿ ಮೀರಿ ಪ್ರಯತ್ನ ತೋರಬೇಕಿದೆ. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್​ ಮಾಡಿ ಗೆಲುವು ಸಾಧಿಸಬಹುದು. ಇದಕ್ಕೆ ಕಳೆದ ಲಕ್ನೋ ವಿರುದ್ಧದ ಪಂದ್ಯವೇ ಸಾಕ್ಷಿ. ಆದ್ದರಿಂದ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ IPL 2023 : ಕೆಕೆಆರ್​ ತಂಡವನ್ನು 23 ರನ್​ಗಳಿಂದ ಮಣಿಸಿದ ಎಸ್​ಆರ್​ಎಚ್​ ಬಳಗ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಇದುವರೆ ಐಪಿಎಲ್​ನಲ್ಲಿ 27 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 16 ಪಂದ್ಯಗಳನ್ನು ಗೆದ್ದರೆ, ಡೆಲ್ಲಿ 10 ಪಂದ್ಯಗಳಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ಕೊನೆಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿ ಆಡಿದ ಒಂದೂ ಪಂದ್ಯವನ್ನು ಸೋಲು ಕಂಡಿಲ್ಲ. ಹೀಗಾಗಿ ಈ ಪಂದ್ಯದ ಮೇಲು ಆರ್​ಸಿಬಿ ಮೇಲೆ ನಿರೀಕ್ಷೆಯೊಂದನ್ನು ಮಾಡಬಹುದು.

Exit mobile version