ನವದೆಹಲಿ: ಗುಜರಾತ್ ಟೈಟಾನ್ಸ್(Gujarat Titans) ತಂಡದ ಘಾತಕ ಬೌಲಿಂಗ್ ದಾಳಿಯ ಮಧ್ಯೆಯೂ ಮಧ್ಯಮ ಕ್ರಮಾಂಕದ ಆಟಗಾರರು ನಡೆಸಿದ ಸಣ್ಣ ಮಟ್ಟದ ಹೋರಾಟದ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡ 16ನೇ ಆವೃತ್ತಿಯ 7ನೇ ಪಂದ್ಯದಲ್ಲಿ 162 ರನ್ ಗಳಿಸಿ ಸವಾಲೊಡ್ಡಿದೆ. ಹಾರ್ದಿಕ್ ಪಾಂಡ್ಯ ಪಡೆ ಗೆಲುವಿಗೆ163 ರನ್ ಬಾರಿಸಬೇಕಿದೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿದೆ.
ಬೌಲಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ತಂಡದ ನಾಯಕನ ಆಯ್ಕೆಯನ್ನು ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್ ಸಮರ್ಥಿಸಿಕೊಂಡರು. ನಾಯಕ ಡೇವಿಡ್ ವಾರ್ನರ್(37), ಪೃಥ್ವಿ ಶಾ(7), ಮಿಚೆಲ್ ಮಾರ್ಷ್(4) ವಿಕೆಟ್ ಕಿತ್ತು ತಂಡಕ್ಕೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಈ ಆಟಗಾರರ ವಿಕೆಟ್ ಪತನದ ಬಳಿಕ ಡೆಲ್ಲಿ ತಂಡದ ಕುಸಿತ ಆರಂಭಗೊಂಡಿತು. ಇನ್ನೇನು 100 ರನ್ ಗಳಿಸುವುದು ಕಷ್ಟ ಎಂದು ಊಹಿಸಿದಾಗ ಐಪಿಎಲ್ ಪದಾರ್ಪಣೆ ಮಾಡಿದ ಅಭಿಷೇಕ್ ಪೋರೆಲ್ ಮತ್ತು ಸರ್ಫರಾಜ್ ಖಾನ್ ಹೋರಾಟವೊಂದನ್ನು ನಡೆಸಿದ ಕಾರಣ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಇದನ್ನೂ ಓದಿ IPL 2023 : ಐಪಿಎಲ್ನಿಂದ ಶ್ರೇಯಸ್ ಅಯ್ಯರ್ ಔಟ್, ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೂ ಅಲಭ್ಯ
ಸರ್ಫರಾಜ್ 30 ರನ್ ಗಳಿಸಿದರೆ, ಅಭಿಷೇಕ್ 20 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ತಂಡದ ಉಪನಾಯಕ ಅಕ್ಷರ್ ಪಟೇಲ್ 21 ಎಸೆತದಿಂದ 36 ರನ್ ಬಾರಿಸಿದರು. ಈ ಪರಿಣಾಮ ತಂಡ 150ರ ಗಟಿ ದಾಟಿತು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ ಮೂರು ಸಿಕ್ಸರ್ ಮತ್ತು 2 ಬೌಂಡರಿ ಸಿಡಿಯಿತು. ಗುಜರಾತ್ ಪರ ಬೌಲಿಂಗ್ನಲ್ಲಿ ಅಲ್ಜಾರಿ ಜೋಸೆಫ್ 2, ರಶೀದ್ ಖಾನ್ ಮತ್ತು ಮೊಹಮ್ಮದ್ ಶಮಿ ತಲಾ 3 ವಿಕೆಟ್ ಕಿತ್ತು ಮಿಂಚಿದರು.
ಮತ್ತೆ ವೈಫಲ್ಯ ಕಂಡ ಪೃಥ್ವಿ, ಮಾರ್ಷ್
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಮಿಚೆಲ್ ಮಾರ್ಷ್ ಅವರು ಈ ಪಂದ್ಯದಲ್ಲಿ ಸಿಡಿದು ನಿಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಈ ಪಂದ್ಯದಲ್ಲಿಯೂ ವೈಫಲ್ಯ ಕಂಡರು. 4 ರನ್ ಗಳಿಸಿದ್ದ ವೇಳೆ ಜೀವದಾನ ಪಡೆದರೂ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು. ಮುಂದಿನ ಎಸೆತದಲ್ಲಿಯೇ ಬೌಲ್ಟ್ ಆಗಿ ಪೆವಿಲಿಯನ್ ಸೇರಿದರು. ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಮುಂಬೈಯ ಪೃಥ್ವಿ ಶಾ ಅವರ ಬ್ಯಾಟ್ ಈ ಬಾರಿ ಸದ್ದು ಮಾಡುವಂತೆ ಕಾಣುತ್ತಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿಯೂ ಅವರದ್ದು ಸಿಂಗಲ್ ಡಿಜಿಟ್. ಉಭಯ ಆಟಗಾರರ ಬ್ಯಾಟಿಂಗ್ ವೈಫಲ್ಯದಿಂದಾಗಿ ತಂಡದ ದೊಡ್ಡ ಮೊತ್ತದ ಯೋಜನೆಗೆ ಹಿನ್ನಡೆಯಾಯಿತು.
ಪಂದ್ಯ ವೀಕ್ಷಿಸಿದ ಪಂತ್
ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್ ಈ ಪಂದ್ಯಕ್ಕೆ ಆಗಮಿಸಿ ತನ್ನ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ಗೆ ಬೆಂಬಲಿಸಿದರು. ಪಂತ್ ಅವರು ಸ್ಟೇಡಿಯಂಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರು ಪಂತ್ ಅವರ ಹೆಸರು ಕೂಗಿ ಯುವ ಆಟಗಾರನಿಗೆ ಹಾರೈಸಿದರು. ಡಗೌಟ್ನಲ್ಲಿ ಕುಳಿತ್ತಿದ್ದ ಸೌರವ್ ಗಂಗೂಲಿ ಕೂಡ ಪಂತ್ ಅವರನ್ನು ಕಂಡು ಖುಷಿ ಪಟ್ಟರು.