ನವದೆಹಲಿ: 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಸದ್ಯ ಪ್ಲೇ ಆಫ್ ಪ್ರವೇಶಕ್ಕೆ ತಂಡಗಳ ಮಧ್ಯೆ ಪೈಪೋಟಿ ಮತ್ತು ಲೆಕ್ಕಾಚಾರಗಳು ನಡೆಯತ್ತಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲು ಕಾಣುವ ಮೂಲಕ ಡೆಲ್ಲಿ ಈ ಬಾರಿಯ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಅವಮಾನಕ್ಕೆ ಸಿಲುಕಿತು.
ಕಾರು ಅಪಘಾತದಿಂದ ಗಾಯಗೊಂಡ ರಿಷಭ್ ಪಂತ್ ಅವರು ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಬದಲಿಗೆ ಡೇವಿಡ್ ವಾರ್ನರ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ನೀಡಲಾಯಿತು. ಆದರೆ ಅವರಿಂದ ತಂಡವನ್ನು ಗೆಲುವಿನ ಲಯಕ್ಕೆ ತರಲು ಸಾಧ್ಯವಾಗಲೇ ಇಲ್ಲ. ತಂಡದ ಸ್ಟಾರ್ ಆಟಗಾರರಾದ ಮಿಚೆಲ್ ಮಾರ್ಷ್, ರಿಲೀ ರೊಸೊ, ಪೃಥ್ವಿ ಶಾ ಹೀಗೆ ಹಲವು ಆಟಗಾರರು ಘೋರ ವೈಫಲ್ಯ ಅನುಭವಿಸಿದರು. ಆದರೆ ನಾಯಕ ವಾರ್ನರ್ ಮಾತ್ರ ಪ್ರತಿ ಪಂದ್ಯದಲ್ಲಿಯೂ ಏಕಾಂಗಿ ಹೋರಾಟ ನಡೆಸಿದರು.
ಇದನ್ನೂ ಓದಿ IPL 2023: ಮ್ಯಾಕ್ಸ್ವೆಲ್, ಡು ಪ್ಲೆಸಿಸ್ ಅರ್ಧಶತಕ; ರಾಜಸ್ಥಾನ್ಗೆ 172 ರನ್ ಗುರಿ
ಆರಂಭಿಕ ಹಂತದಲ್ಲಿ ಸತತ ಆರು ಸೋಲು ಕಂಡಾಗಲೇ ಡೆಲ್ಲಿ ಈ ಬಾರಿ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿತ್ತು. ಆದರೆ ಆ ಬಳಿಕ ಫಿನಿಕ್ಸ್ನಂತೆ ಎದ್ದು ನಿಂತ ಡೆಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ ಗೆಲುವಿನ ಹಳಿ ಏರಿತು. ಈ ವೇಳೆ ಡೆಲ್ಲಿಯ ಮೇಲೆ ಮೇಲೆ ವಿಶ್ವಾಸವೊಂದು ಹುಟ್ಟಿಕೊಂಡಿತು. ಆದರೆ ಮತ್ತೆ ಡೆಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು. ಆಡಿದ 12 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವು ಸಾಧಿಸಿ 8 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಸದ್ಯ ಡೆಲ್ಲಿ ಮುಂದಿರುವ ಯೋಜನೆಯೆಂದರೆ ಅಂತಿಮ 2 ಪಂದ್ಯಗಳಲ್ಲಿ ಗೆದ್ದು ತೀರಾ ಕಳಪೆ ಪ್ರದರ್ಶನದಿಂದ ಹೊರಬರುವುದಾಗಿದೆ.