Site icon Vistara News

IPL 2023: ಹ್ಯಾಟ್ರಿಕ್​ ಸೋಲಿಗೆ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್​; ರಾಜಸ್ಥಾನ್​ಗೆ 57 ರನ್​ ಗೆಲುವು

IPL 2023: Delhi Capitals suffer hat-trick defeat; Rajasthan won by 57 runs

IPL 2023: Delhi Capitals suffer hat-trick defeat; Rajasthan won by 57 runs

ಗುವಾಹಟಿ: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಬೊಂಬಾಟ್​ ಪ್ರದರ್ಶನ ತೋರಿದ ರಾಜಸ್ಥಾನ್​ ರಾಯಲ್ಸ್​(Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 57 ರನ್​ಗಳ ಗೆಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಈ ಸೋಲಿನಿಂದ ಹ್ಯಾಟ್ರಿಕ್​ ಸೋಲು ಕಂಡ ಅವಮಾನಕ್ಕೆ ಸಿಲುಕಿತು. ರಾಜಸ್ಥಾನ್​ ಆಡಿದ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿತು.

ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆದ ಶನಿವಾರದ ಐಪಿಎಲ್​ನ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ರಾಜಸ್ಥಾನ್​ ರಾಯಲ್ಸ್​ ಯಶಸ್ವಿ ಜೈಸ್ವಾಲ್​(60) ಮತ್ತು ಜಾಸ್​ ಬಟ್ಲರ್​(79) ಅವರ ಸೊಗಸಾದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 199 ರನ್​ ಗಳಿಸಿತು. ಜವಾಬಿತ್ತ ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಪಾಲಿನ ಆಟದಲ್ಲಿ 9 ವಿಕೆಟ್​ ಕಳೆದುಕೊಂಡು 142 ರನ್​ ಗಳಿಸಲಷ್ಟೇ ಶಕ್ತವಾಯಿತು.

ಬೌಲ್ಟ್​ ದಾಳಿಗೆ ಕುಸಿದ ಡೆಲ್ಲಿ

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿಗೆ ಖಾತೆ ತೆರೆಯುವ ಮುನ್ನವೇ ಕಿವೀಸ್​ ವೇಗಿ ಟ್ರೆಂಟ್​ ಬೌಲ್ಟ್​ ಅವಳಿ ಆಘಾತವಿಕ್ಕಿದರು. ಕನ್ನಡಿಗ ಮನೀಷ್​ ಪಾಂಡೆ(0), ಪೃಥ್ವಿ ಶಾ(0) ವಿಕೆಟ್​ ಕಿತ್ತು ಆರಂಭಿಕ ಶಾಕ್​ ನೀಡಿದರು. ಆದರೆ ನಾಯಕ ಡೇವಿಡ್​ ವಾರ್ನರ್​ ಮಾತ್ರ ಒಂದು ಬದಿಯಲ್ಲಿ ಗಟ್ಟಿಯಾಗಿ ನಿಂತು ತಂಡಕ್ಕೆ ಆಸರೆಯಾದರು. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಲಲಿತ್​ ಯಾದವ್​ ಸಣ್ಣ ಮಟ್ಟದ ಬೆಂಬಲ ನಿಡಿದರು. ಆದರೆ 38 ರನ್​ ಗಳಿಸಿದ್ದ ವೇಳೆ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದರು.

ದಕ್ಷಿಣ ಆಫ್ರಿಕಾದ ಹಾರ್ಡ್​ ಹಿಟ್ಟರ್​ ರೀಲಿ ರೂಸೊ ಈ ಪಂದ್ಯದಲ್ಲಿಯೂ ಘೋರ ಬ್ಯಾಟಿಂಗ್​ ವೈಫಲ್ಯ ಕಂಡರು. ಅವರ ಮೇಲಿಟ್ಟಿದ್ದ ಎಲ್ಲ ನಿರೀಕ್ಷೆಗಳು ಈ ಪಂದ್ಯದಲ್ಲಿಯೂ ಹುಸಿಯಾಯಿತು. 12 ಎಸೆತಗಳಿಂದ ಕೇವಲ 14 ರನ್​ಗೆ ಸೀಮಿತವಾದರು. ಇದಕ್ಕೂ ಮುನ್ನ ಆಡಿದ ಎರಡು ಪಂದ್ಯಗಳಲ್ಲಿಯೂ ಅವರು ಕಳಪೆ ಬ್ಯಾಟಿಂಗ್​ ನಡೆಸಿದ್ದರು.

ನಂಬುಗೆಯ ಬ್ಯಾಟರ್​ಗಳೆಲ್ಲ ಕೈ ಕೊಟ್ಟರೂ ನಾಯಕ ಡೇವಿಡ್​ ವಾರ್ನರ್​ ಏಕಾಂಗಿಯಾಗಿ ಹೋರಾಟ ನಡೆಸಿ ಅರ್ಧಶತಕ ಪೂರ್ತಿಗೊಳಿಸಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಆದರೆ ಇವರಿಗೆ ಯಾರೂ ಕೂಡ ಸರಿಯಾದ ಸಾಥ್​​ ನೀಡದ ಪರಿಣಾಮ ತಂಡ ಸೋಲು ಕಂಡಿತು. ಅಕ್ಷರ್​ ಪಟೇಲ್,​ ರೋಮನ್​ ಪೋವೆಲ್​ ಕೇವಲ ಒಂದಂಕಿಗೆ ಆಟ ಮುಗಿಸಿದರು. 19 ಓವರ್​ ತನಕ ಹೋರಾಡಿದ ವಾರ್ನರ್​ 65 ರನ್​ ಗಳಿಸಿ ಚಹಲ್​ ಅವರ ಅಂತಿಮ ಎಸೆತಕ್ಕೆ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ವಾರ್ನರ್​ ತಮ್ಮ ಅರ್ಧಶತಕದ ಇನಿಂಗ್ಸ್​ನಲ್ಲಿ 7 ಬೌಂಡರಿ ಬಾರಿಸಿದರು. ರಾಜಸ್ಥಾನ್​ ಪರ ಬೌಲ್ಟ್​ ನಾಲ್ಕು ಓವರ್​ ಎಸೆದು 29 ರನ್​ಗೆ ಮೂರು ವಿಕೆಟ್​ ಕಿತ್ತರು. ಇದರಲ್ಲಿ ಒಂದು ಓವರ್​ ಮೇಡನ್​ ಆಗಿತ್ತು. ಯಜುವೇಂದ್ರ ಚಹಲ್​ ಮೂರು ವಿಕೆಟ್​, ಆರ್​ ಅಶ್ವಿನ್​ 25 ರನ್​ಗೆ 2 ವಿಕೆಟ್​ ಪಡೆದರು.

ಜೋಶ್​​ನಿಂದ ಬ್ಯಾಟ್​ ಬೀಸಿದ ಬಟ್ಲರ್​, ಜೈಸ್ವಾಲ್​

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ್ದ ರಾಜಸ್ಥಾನ್​ ತಂಡದ ಪರ ಜಾಸ್​ ಬಟ್ಲರ್​ ಮತ್ತು ಯಶಸ್ವಿ ಜೈಸ್ವಾಲ್​ ಜೋಶ್​ನಿಂದಲೇ ಬ್ಯಾಟಿಂಗ್​​ ನಡೆಸಿ ಡೆಲ್ಲಿ ಬೌಲರ್​ಗಳ ಮೇಲೆ ಸವಾರಿ ಮಾಡಿದ್ದರು. ಉಭಯ ಆಟಗಾರರು ಬೌಂಡರಿ ಸಿಕ್ಸರ್​ಗಳ ಮಳೆಯನ್ನೇ ಹರಿಸಿದರು. ಪ್ರತಿ ಓವರ್​ಗೆ 10ರ ಸರಾಸರಿಯಲ್ಲಿ ಬ್ಯಾಟ್​ ಬೀಸಿ ಪವರ್​ ಪ್ಲೇಯಲ್ಲಿ 68 ರನ್​ ಒಟ್ಟು ಗೂಡಿಸಿದರು.

ಆರಂಭದಲ್ಲಿ ಬಟ್ಲರ್​ ಅವರು ನಿಧಾನಗತಿಯ ಆಟಕ್ಕೆ ಒತ್ತು ಕೊಟ್ಟರು. 17 ರನ್​ಗಳಿಸಿದ್ದ ವೇಳೆ ಒಂದು ಜೀವದಾನವನನ್ನೂ ಪಡೆದರು. ಖಲೀಲ್​ ಅಹ್ಮದ್​ ಅವರ ಓವರ್​ನಲ್ಲಿ ಅನ್ರಿಜ್​ ನೋರ್ಜೆ ಕ್ಯಾಚ್​ ಕೈಚೆಲ್ಲಿದರು. ಆದರೆ ಮತ್ತೊಂದು ಬದಿಯಲ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಎಡಗೈ ಬ್ಯಾಟರ್​ ಜೈಸ್ವಾಲ್​ ಅರ್ಧಶತಕ ಬಾರಿಸಿ ಮಿಂಚಿದರು. ಕುಲ್ದೀಪ್​ ಯಾದವ್​ ಅವರ ಮೊದಲ ಓವರ್​ನಲ್ಲಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ ಜೈಸ್ವಾಲ್ ಅವರು ಮುಕೇಶ್​ ಕುಮಾರ್​ ಅವರ ಮುಂದಿನ ಓವರ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್ ಒಪ್ಪಿಸಿದರು. ಅವರು 31 ಎಸೆತಗಳಿಂದ 11 ಬೌಂಡರಿ ಮತ್ತು ಒಂದು ಸಿಕ್ಸರ್​ ನರವಿನಿಂದ 60 ರನ್​ ಬಾರಿಸಿದರು. ಬಟ್ಲರ್​ ಮತ್ತು ಜೈಸ್ವಾಲ್​ ಸೇರಿ ಮೊದಲ ವಿಕೆಟ್​ಗೆ 98ರನ್​ಗಳ ಜತೆಯಾಟ ನಡೆಸಿದರು.

ಇದನ್ನೂ ಓದಿ IPL 2023: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಮಿಶ್ರ ಪ್ರತಿಕ್ರಿಯೆ; ತಂಡಗಳಿಂದ ಅಭಿಪ್ರಾಯ ಕೇಳಿದ ಬಿಸಿಸಿಐ

ಮೊದಲೆರಡು ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ್ದ ನಾಯಕ ಸಂಜು ಸ್ಯಾಮ್ಸನ್​ ಈ ಪಂದ್ಯದಲ್ಲಿ ಶೂನ್ಯ ಸಂಕಟಕ್ಕೆ ಸಿಲುಕಿದರು. 4 ಎಸೆತ ಎದುರಿಸಿ ಖಾತೆ ತೆರೆಯುವಲ್ಲಿ ವಿಫಲರಾದರು. ಜೈಸ್ವಾಲ್​ ಮತ್ತು ಸಂಜು ವಿಕೆಟ್​ ಪತನದ ಬಳಿಕ ಬಟ್ಲರ್​ ತಮ್ಮ ಬ್ಯಾಟಿಂಗ್​ಗೆ ವೇಗ ನೀಡಲಾರಂಭಿಸಿದರು.​ ಇದೇ ವೇಳೆ ಅವರು ತಮ್ಮ ಅರ್ಧಶತಕವನ್ನು ಪೂರೈಸಿದರು. ರನ್​ ಗಳಿಸಲು ಪರದಾಡಿದ ರಿಯಾನ್​ ಪರಾಗ್ 11 ಎಸೆತ ಎದುರಿಸಿ 7 ರನ್​ಗೆ ಸೀಮಿತಗೊಂಡರು.​ ಉತ್ತಮ ಸ್ಥಿತಿಯಲ್ಲಿದ್ದ ರಾಯಲ್ಸ್​ ಒಂದು ಹಂತದಲ್ಲಿ ದಿಢೀರ್​ ಕುಸಿತ ಕಂಡಿತು. ಆದರೆ ಶಿಮ್ರಾನ್​ ಹೆಟ್​ಮೈರ್ ಅವರು ಬಟ್ಲರ್​ ಜತೆಗೂಡಿ ಉತ್ತಮ ಇನಿಂಗ್ಸ್​ ಕಟ್ಟಿದರು. ಇದರಿಂದ ರನ್​ ಗತಿ ಮತ್ತೆ ಏರಿಕೆ ಕಂಡಿತು.

ಸಿಡಿಲಬ್ಬರ ಬ್ಯಾಟಿಂಗ್​ ನಡೆಸಿದ ಬಟ್ಲರ್​ 51 ಎಸೆತಗಳಿಂದ 79 ರನ್​ ಬಾರಿಸಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್​ ಸಿಡಿಯಿತು. ಈ ವಿಕೆಟ್ ಕೂಡ ಮುಕೇಶ್​ ಕುಮಾರ್​ ಪಾಲಾಯಿತು. ಜೈಸ್ವಾಲ್​ ವಿಕೆಟ್​ ಕೂಡ ಇವರೇ ಕಿತ್ತಿದ್ದರು. ಬಟ್ಲರ್​ ವಿಕೆಟ್​ ಪತನಗೊಂಡರೂ ಶಿಮ್ರಾನ್​ ಹೆಟ್​ಮೈರ್​ ತಮ್ಮ ಬ್ಯಾಟಿಂಗ್​ ಪ್ರತಾಪವನ್ನು ಮುಂದುವರಿಸಿದರು. ಅಂತಿಮ ಓವರ್​ನಲ್ಲಿ 2 ಸಿಕ್ಸರ್​ ಬಾರಿಸಿದರು. ಕೇವಲ 20 ಎಸೆತ ಎದುರಿಸಿದ ಅವರು ಭರ್ಜರಿ ನಾಲ್ಕು ಸಿಕ್ಸರ್​ ಮತ್ತು ಒಂದು ಬೌಂಡರಿ ನೆರವಿನಿಂದ ಅಜೇಯ 39 ರನ್​ ಸಿಡಿಸಿದರು. ಡೆಲ್ಲಿ ಪರ ಖಲೀಲ್​ ಅಹ್ಮದ್​ 2 ಓವರ್​ಗಳಿಂದ 31 ರನ್​ ಬಿಟ್ಟುಕೊಟ್ಟು ದುಬಾರಿಯಾಗಿ ಪರಿಣಮಿಸಿದರು.

Exit mobile version