ನವದೆಹಲಿ: ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆಲುವು ದಾಖಲಿಸಿದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್(Gujarat Titans) ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಮಂಗಳವಾರ ರಾತ್ರಿ ನಡೆಯುವ ಐಪಿಎಲ್ನ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡದ ಸವಾಲು ಎದುರಿಸಲಿದೆ. ಡೆಲ್ಲಿಗೆ ಇದು ತವರಿನ ಪಂದ್ಯವಾಗಿದೆ. ಇಲ್ಲಿ ವಾರ್ನರ್ ಪಡೆ ಗೆಲುವಿನ ಗೆಲುವಿನ ಖಾತೆ ತೆರೆದೀತೇ ಎಂದು ಕಾದು ನೋಡಬೇಕಿದೆ. ಈ ಪಂದ್ಯಕ್ಕೆ ರಿಷಭ್ ಪಂತ್ ಅವರು ಆಗಮಿಸುವ ಸಾಧ್ಯತೆ ಇದೆ.
ಗುಜರಾತ್ ತಂಡ ಯುವ ಪಡೆಯನ್ನೇ ನೆಚ್ಚಿಕೊಂಡಿದೆ. ದಕ್ಷಿಣ ಆಫ್ರಿಕಾದ ಹಾರ್ಡ್ ಹಿಟ್ಟರ್ ಡೇವಿಡ್ ಮಿಲ್ಲರ್ ತಂಡವನ್ನು ಕೂಡಿಕೊಂಡಿರುವುದು ಪಾಂಡ್ಯ ಪಡೆ ಮತ್ತಷ್ಟು ಬಲಿಷ್ಠಗೊಂಡಿದೆ. ವೃದ್ಧಿಮಾನ್ ಸಾಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ರಶೀದ್ ಖಾನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಒಟ್ಟಾರೆ ತಂಡ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ.
ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡದಲ್ಲಿ ಬೌಲಿಂಗ್ ಸಮಸ್ಯೆ ಎದ್ದು ಕಾಣುತ್ತಿತ್ತು. ಮುಖೇಶ್ ಕುಮಾರ್, ಚೇತನ್ ಸಕಾರಿಯಾ ಅನಾನುಭವಿಗಳಾದ ಕಾರಣ ಅವರ ಬೌಲಿಂಗ್ ಅಷ್ಟಾಗಿ ಘಾತಕವಾಗಿರಲಿಲ್ಲ. ಆದರೆ ಇದೀಗ ದಕ್ಷಿಣ ಆಫ್ರಿಕಾ ತಂಡದ ವೇಗಿಗಳಾದ ಆನ್ರಿಚ್ ನೋರ್ಜೆ ತಂಡಕ್ಕೆ ಆಗಮಿಸಿರುವುದು ಡೆಲ್ಲಿಗೆ ಕೊಂಚ ಆತ್ಮವಿಶ್ವಾಸ ಮೂಡಿದಂತಿದೆ. ಬ್ಯಾಟಿಂಗ್ನಲ್ಲಿ ನಾಯಕ ಡೇವಿಡ್ ವಾರ್ನರ್ ಹೊರತು ಪಡಿಸಿ ಉಳಿದ ಯಾವುದೇ ಆಟಗಾರರಿಂದಲೂ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ಕಂಡುಬಂದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಪೃಥ್ವಿ ಶಾ, ಸರ್ಫರಾಜ್ ಖಾನ್, ಮಿಚೆಲ್ ಮಾರ್ಷ್ ಸಿಡಿಯಬೇಕಿದೆ.
ಪಂತ್ ಹಾಜರ್
ಕಳೆದ ಡಿಸೆಂಬರ್ನಲ್ಲಿ ಪಂತ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಸದ್ಯ ಅವರು ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಗಾಯಗೊಂಡ ಕಾರಣದಿಂದ ಅವರು ಈ ಬಾರಿಯ ಐಪಿಎಲ್ನಿಂದ ಹೊರಬಿದ್ದಿದ್ದರು. ಅವರ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಅವರು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇದೀಗ ಪಂತ್ ಅವರು ತನ್ನ ತಂಡಕ್ಕೆ ಬೆಂಬಲ ನೀಡುವ ಸಲುವಾಗಿ ಈ ಪಂದವೇಳೆ ಉಪಸ್ಥಿತರಿದ್ದು ಪಂದ್ಯ ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IPL 2023 : ಆಡಿದ ಮೂರು ಎಸೆತಗಳಲ್ಲಿ ಐಪಿಎಲ್ ಸಾಧನೆ ಮಾಡಿದ ಮಹೇಂದ್ರ ಸಿಂಗ್ ಧೋನಿ; ಏನದು ದಾಖಲೆ?
ಮೊದಲ ಪಂದ್ಯದಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪಂತ್ ಅವರ ಉಪಸ್ಥಿತಿ ಆತ್ಮವಿಶ್ವಾಸ ತುಂಬಲಿದೆ. ದೆಹಲಿಯ ಅರುಣ್ ಜೇಟ್ಲಿಯಲ್ಲಿ ನಡೆಯಲಿರುವ ಈ ಪಂದ್ಯದ ವೇಳೆ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ತಂಡದ ಸಹ ಆಟಗಾರರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದು ಚೇತರಿಕೆ ಕಾಣುವ ಪಂತ್ ಅವರಿಗೂ ಒಂದು ರೀತಿಯ ಸ್ಫೂರ್ತಿಯಾಗಲಿದೆ.