ಮೊಹಾಲಿ: ಪಂಜಾಬ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್(gujarat titans) ತಂಡ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಆದರೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ(hardik pandya) ಅವರಿಗೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಪಾಂಡ್ಯಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಮೊಹಾಲಿಯ ಐ.ಎಸ್.ಬಿಂದ್ರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿತು. ಜವಾಬಿತ್ತ ಗುಜರಾತ್ ಟೈಟನ್ಸ್ 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕ ಹಾರ್ದಿಕ್ ಪಾಂಡ್ಯ ಅವರು ನಿಗದಿತ ಸಮಯದ ಒಳಗಡೆ ಓವರ್ ಮುಕ್ತಾಯಗೊಳಿಸಲು ವಿಫಲರಾದರು. ಇದರಿಂದ ಅವರಿಗೆ ದಂಡ ವಿಧಿಸಲಾಗಿದೆ. ” ಐಪಿಎಲ್‌ನ ನೀತಿ ಸಂಹಿತೆಯಡಿಯಲ್ಲಿ ಕನಿಷ್ಠ ಓವರ್‌ರೇಟ್ ಕಾಯ್ದುಕೊಳ್ಳುವ ಅಪರಾಧಗಳಿಗೆ ಸಂಬಂಧಿಸಿದಂತೆ ಈ ಋತುವಿನಲ್ಲಿ ತಂಡದ ಮೊದಲ ಅಪರಾಧವಾಗಿದೆ. ಹೀಗಾಗಿ ನಾಯಕ ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ IPL 2023: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಕೆಕೆಆರ್; ರಿಂಕು ಸಿಂಗ್ ಪಂದ್ಯದ ಪ್ರಧಾನ ಆಕರ್ಷಣೆ
ಈ ಬಾರಿಯ ಐಪಿಎಲ್‌ನಲ್ಲಿ ಇದು ಸತತ ಮೂರನೇ ಓವರ್ ರೇಟ್ ಸಂಬಂಧಿತ ಪ್ರಕರಣ. ಇದಕ್ಕೂ ಮುನ್ನ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ಗೆ ಇದೇ ಕಾರಣಕ್ಕೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಒಂದೊಮ್ಮೆ ಮುಂದಿನ ಪಂದ್ಯದಲ್ಲಿಯೂ ಈ ನಾಯಕರು ಮತ್ತೆ ಈ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಒಂದು ಪಂದ್ಯದ ನಿಷೇಧ ಶಿಕ್ಷೆಗೂ ಗುರಿಯಾಗಬಹುದು.
ಪಾಂಡ್ಯ ಮತ್ತೆ ವಿಫಲ
ನಾಯಕ ಪಾಂಡ್ಯ ಅವರ ಬ್ಯಾಟಿಂಗ್ ವೈಫಲ್ಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿಯೂ ಮುಂದುವರಿಯಿತು. ಕೇವಲ 8 ರನ್ಗೆ ಔಟಾಗುವ ಮೂಲಕ ಅವರು ಮತ್ತೆ ಎರಡಂಕಿ ಮೊತ್ತ ದಾಟುವಲ್ಲಿ ವಿಫಲರಾದರು. ಇದಕ್ಕೂ ಮುನ್ನ ಆಡಿದ ಎರಡು ಪಂದ್ಯದಲ್ಲಿ ಕ್ರಮವಾಗಿ ಅವರು ಗಳಿಸಿದ ಮೊತ್ತ 8,5. ಇದೀಗ ಮೂರು ಪಂದ್ಯಗಳಲ್ಲಿ ಅವರ ಬ್ಯಾಟ್ನಿಂದ ಬಂದ ಒಟ್ಟು ಮೊತ್ತ 21. ಸದ್ಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗಿಲ್ ಮತ್ತು ಸಹ ಆಟಗಾರರು ಆಡಿದ ಕಾರಣ ಪಂದ್ಯ ಗೆಲುವು ದಾಖಲಿಸಿತು. ಆದರೆ ಮುಂದಿನ ಪಂದ್ಯದಲ್ಲಿಯೂ ಇವರನ್ನೇ ನಂಬಿ ಕೂತರೆ, ಒಂದೊಮ್ಮೆ ಅವರು ಆಡದೇ ಹೋದರೆ ಪಂದ್ಯ ಸೋಲು ಕಾಣುವುದು ಖಚಿತ. ಹೀಗಾಗಿ ಪಾಂಡ್ಯ ತಕ್ಷಣ ಎಚ್ಚೆತ್ತುಕೊಂಡು ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳುವ ಅನಿವಾರ್ಯತೆ ಇದೆ.