ಗುವಾಹಟಿ: ನಾಯಕ ಶಿಖರ್ ಧವನ್(ಅಜೇಯ 86) ಮತ್ತು ಪ್ರಭಾಸಿಮ್ರಾನ್ ಸಿಂಗ್(60) ಅವರ ಅತ್ಯಾಕರ್ಷಕ ಅರ್ಧಶತಕದ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಬುಧವಾರದ ಐಪಿಎಲ್ನ(IPL 2023) 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 197 ರನ್ ಗಳಿಸಿದೆ. ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 198 ರನ್ ಬಾರಿಸಬೇಕಿದೆ.
ಗುವಾಹಟಿಯ(Guwahati) ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್(Punjab Kings) ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 197 ರನ್ ಗಳಿಸಿ ಸವಾಲೊಡ್ಡಿದೆ. ಇದು ಗುವಾಹಟಿಯಲ್ಲಿ ನಡೆಯುತ್ತಿರುವ ಮೊದಲ ಐಪಿಎಲ್ ಪಂದ್ಯವಾಗಿದೆ. ಹೀಗಾಗಿ ಅಸ್ಸಾಂ ಕ್ರಿಕೆಟ್ ಮಂಡಳಿ ಪಂದ್ಯದ ಆರಂಭಕ್ಕೂ ಮುನ್ನ ಲೇಸರ್ ಶೋ, ಜಾನಪದ ನೃತ್ಯದೊಂದಿಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಅರ್ಧಶತಕ ಬಾರಿಸಿದ ಪ್ರಭಾಸಿಮ್ರಾನ್ ಸಿಂಗ್
ಇನಿಂಗ್ಸ್ ಆರಂಭಿಸಿದ ಪಂಜಾಬ್ ಕಿಂಗ್ಸ್ಗೆ ಆರಂಭಿಕರಾದ ಪ್ರಭಾಸಿಮ್ರಾನ್ ಸಿಂಗ್(Prabhsimran Singh) ಮತ್ತು ನಾಯಕ ಶಿಖರ್ ಧವನ್(Shikhar Dhawan) ಉತ್ತಮ ಆರಂಭ ಒದಗಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಯುವ ಆಟಗಾರ ಪ್ರಭಾಸಿಮ್ರಾನ್ ಸಿಂಗ್ ರಾಜಸ್ಥಾನ್ ಬೌಲರ್ಗಳಿಗೆ ಸತತ ಸಿಕ್ಸರ್ ಮತ್ತು ಬೌಂಡರಿಗಳ ರುಚಿ ತೋರಿಸಿದರು. ಇನ್ನೊಂದು ಬದಿಯಲ್ಲಿ ಶಿಖರ್ ಧವನ್ ನಿಧಾನಗತಿಯಲ್ಲಿ ಆಡುತ್ತಾ ಪ್ರಭಾಸಿಮ್ರಾನ್ ಸಿಂಗ್ ಉತ್ತಮ ಸಾಥ್ ನೀಡುತ್ತಿದ್ದರು. ಪವರ್ ಪ್ಲೇ ಮುಕ್ತಾಯಕ್ಕೆ ಈ ಜೋಡಿ 10ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 63 ರನ್ ರಾಶಿ ಹಾಕಿತು.
ಪವರ್ ಪ್ಲೇ ಬಳಿಕವೂ ಬಿರುಸಿನ ಬ್ಯಾಟಿಂಗ್ ನಡೆಸಿದ ಪ್ರಭಾಸಿಮ್ರಾನ್ ಸಿಂಗ್ ಅರ್ಧಶತಕ ಬಾರಿಸಿ ಮಿಂಚಿದರು. ಒಂದು ಹಂತದಲ್ಲಿ ಇವರ ಬ್ಯಾಟಿಂಗ್ ವೇಗವನ್ನು ನೋಡುವಾಗ ಶತಕ ಬಾರಿಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಜೇಸನ್ ಹೋಲ್ಡರ್ ಅವರ ಎಸೆತಕ್ಕೆ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಜಾಸ್ ಬಟ್ಲರ್ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ಬೌಂಡರಿ ಲೈನ್ನಿಂದ ಓಡಿಬಂದ ಜಾಸ್ ಬಟ್ಲರ್ ಚಿರತೆಯಂತೆ ಜಿಗಿದು ಈ ಕ್ಯಾಚ್ ಪಡೆದರು. ಧವನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಜೋಡಿ ಮೊದಲ ವಿಕೆಟ್ಗೆ ಬರೋಬ್ಬರಿ 90 ರನ್ ಜತೆಯಾಟ ನಡೆಸಿತು. ಪ್ರಭಾಸಿಮ್ರಾನ್ ಸಿಂಗ್ ಕೇವಲ 34 ಎಸೆತ ಎದುರಿಸಿ 60 ರನ್ ಬಾರಿಸಿದರು. ಈ ಸ್ಫೋಟಕ ಬ್ಯಾಟಿಂಗ್ ವೇಳೆ 7 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಯಿತು.
ಚಹಲ್ಗೆ ಚಳಿ ಬಿಡಿಸಿದ ಧವನ್
ಪ್ರಭಾಸಿಮ್ರಾನ್ ಸಿಂಗ್ ವಿಕೆಟ್ ಪತನದ ಬಳಿಕ ಧವನ್ ಕೂಡ ಹೊಡಿ ಬಡಿ ಆಟಕ್ಕೆ ಮುಂದಾದರು. ಇದೇ ವೇಳೆ ಅವರು ಆರ್. ಅಶ್ವಿನ್ ಅವರ ಓವರ್ನಲ್ಲಿ ನೇರವಾಗಿ ಹೊಡೆದ ಚೆಂಡು ಭಾನುಕಾ ರಾಜಪಕ್ಸ ಅವರ ಕೈಗೆ ತಗುಲಿತು. ನೋವಿನಿಂದ ಬಳಲಿದ ಅವರು ಅರ್ಧಕ್ಕೆ ಆಟ ನಿಲ್ಲಿಸಿ ಮೈದಾನ ತೊರೆದರು. ಅವರು ಒಂದು ಎಸೆತ ಎದುರಿಸಿ ಒಂದು ರನ್ ಗಳಿಸಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದ ಚಹಲ್ ಅವರಿಗೆ ಧವನ್ ಈ ಪಂದ್ಯದಲ್ಲಿ ಚಳಿ ಬಿಡಿಸಿದರು. ಒಂದೇ ಓವರ್ನಲ್ಲಿ ಸತತ ಎರಡು ಬೌಂಡರಿ ಮತ್ತು ಸಿಕ್ಸರ್ ಚಚ್ಚಿದರು. ಚಹಲ್ ಅವರ ಈ ಓವರ್ನಲ್ಲಿ 18 ರನ್ ಸೋರಿಕೆಯಾಯಿತು.
ಇದನ್ನೂ ಓದಿ IPL 2023: ಗುಜರಾತ್ ಟೈಟಾನ್ಸ್ ಸೇರಿಕೊಂಡ ದಸುನ್ ಶನಕ
ಬೆನ್ನು ಬಿಡದ ಬೇತಾಳನಂತೆ ಕಾಡಿದ ಧವನ್ ಅವರು ಚಹಲ್ ಅವರ ದ್ವಿತೀಯ ಓವರ್ನಲ್ಲಿಯೂ ಬೌಂಡರಿಗಳ ಸುರಿಮಳೆ ಸುರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಧವನ್ ಅವರು ಇದೇ ಓವರ್ನಲ್ಲಿ ಒಂದು ಜೀವದಾನ ಕೂಡ ಪಡೆದರು. ಚಹಲ್ ಅವರೇ ಕ್ಯಾಚ್ ಬಿಟ್ಟು ಈ ಜೀವದಾನ ನೀಡಿದರು. ಧವನ್ ಜತೆ ಜಿತೇಶ್ ಶರ್ಮಾ ಕೂಡ ಸ್ಫೋಟಕ ಆಟಕ್ಕೆ ಒಗ್ಗಿಕೊಂಡರು. 14 ಓವರ್ ಆಗುವ ವೇಳೆ ತಂಡ ಒಂದು ವಿಕೆಟ್ಗೆ 141 ರನ್ ಗಳಿಸಿತು. ಸಂಜು ಸ್ಯಾಮ್ಸನ್ ಅವರ ಬೌಲಿಂಗ್ ಆಯ್ಕೆಯನ್ನು ಬೌಲರ್ಗಳು ಹುಸಿಯಾಗಿಸಿದರು. ಪ್ರತಿ ಓವರ್ಗೆ 10ರಂತೆ ರನ್ ಬಿಟ್ಟು ಕೊಟ್ಟು ದುಬಾರಿಯಾಗಿ ಪರಿಣಮಿಸಿದರು. ಬೌಲ್ಟ್, ಆಸೀಫ್ ಬೌಲಿಂಗ್ ಮರೆತವರಂತೆ ಬೌಲಿಂಗ್ ನಡೆಸಿದರು.
ಧವನ್ ಅವರಿಂದ ಸತತ ಬೌಂಡರಿ ಹೊಡೆಸಿಕೊಂಡು ಬೆಂಡಾಗಿದ್ದ ಚಹಲ್ ಕೊನೆಗೂ ಜಿತೇಶ್ ಶರ್ಮ ರೂಪದಲ್ಲಿ ಒಂದು ವಿಕೆಟ್ ಕಿತ್ತರು. ಜಿತೇಶ್ ಶರ್ಮಾ 16 ಎಸೆತಗಳಿಂದ 27 (2 ಬೌಂಡರಿ, ಒಂದು ಸಿಕ್ಸರ್) ರನ್ ಕೊಡುಗೆ ನೀಡಿದರು. ಧವನ್ ಜತೆಗೂಡಿ 2ನೇ ವಿಕೆಟ್ಗೆ 60 ರನ್ ಜತೆಯಾಟ ನಡೆಸಿದರು. ಬಳಿಕ ಬಂದ ಜಿಂಬಾಬ್ವೆಯ ಹಿರಿಯ ಆಟಗಾರ ಸಿಕಂದರ್ ರಾಜಾ 1 ರನ್ಗೆ ಸೀಮಿತರಾದರು. ಧವನ್ 56 ಎಸೆತಗಳಿಂದ 86 ರನ್ ಬಾರಿಸಿ ಅಜೇಯರಾಗಿ ಉಳಿದರು. ಧವನ್ ಅವರ ಈ ಮನಮೋಹಕ ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು ಮೂರು ಸಿಕ್ಸರ್ ದಾಖಲಾಯಿತು. ರಾಯಲ್ಸ್ ಪರ ಜೇಸನ್ ಹೋಲ್ಡರ್ 29 ರನ್ಗೆ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 197, (ಶಿಖರ್ ಧವನ್ ಅಜೇಯ 86, ಪ್ರಭಾಸಿಮ್ರಾನ್ ಸಿಂಗ್ 60, ಜಿತೇಶ್ ಶರ್ಮಾ 27, ಜೇಸನ್ ಹೋಲ್ಡರ್ 29ಕ್ಕೆ 2).