ಚೆನ್ನೈ: ಈ ಬಾರಿಯ ಐಪಿಎಲ್ ಆರಂಭವಾದಗಿನಿಂದ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಅವರ ಐಪಿಎಲ್ ವಿದಾಯದ ಟಾಕ್ಗೆ ಇದೀಗ ಸ್ವತಃ ಧೋನಿ ಅವರೇ ಉತ್ತರ ನೀಡಿದ್ದಾರೆ. ಗುಜರಾತ್ ವಿರುದ್ಧ ಗೆದ್ದು 10ನೇ ಬಾರಿಗೆ ಫೈನಲ್ ಪ್ರವೇಶಿಸಿದ ಬಳಿಕ ಮಾತನಾಡಿದ ಧೋನಿ ತಮ್ಮ ನಿವೃತ್ತಿ ವಿಚಾರ ಮತ್ತು ಗಾಯದ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಧೋನಿ, ಸದ್ಯಕ್ಕೆ ಐಪಿಎಲ್ ನಿವೃತ್ತಿ ಬಗ್ಗೆ ಯಾವುದೇ ನಿರ್ಧಾರ ತಗೆದುಕೊಳ್ಳುವುದಿಲ್ಲ. 2024ರ ಐಪಿಎಲ್ ಮಿನಿ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ. ಇದರ ಒಳಗೆ ನನ್ನ ಫಿಟ್ನೆಸ್ ಹೇಗಿರುತ್ತದೆ ಎನ್ನುವುದನ್ನು ನೋಡಿಕೊಂಡು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
“ನಿವೃತ್ತಿ ಬಗ್ಗೆ ನನಗೆ ಗೊತ್ತಿಲ್ಲ. ಇದರ ಬಗ್ಗೆ ನಾನು ಈಗ ಚಿಂತಿಸುವುದಿಲ್ಲ. ಸದ್ಯ ನನ್ನ ಮುಂದಿರುವ ಗುರಿ ಫೈನಲ್ಗೆ ಬೇಕಾದ ತಯಾರಿ ಮತ್ತು ಕಪ್ ಗೆಲ್ಲುವುದು. ನಿವೃತ್ತಿ ಬಗ್ಗೆ ಯೋಚಿಸಲು ನನಗೆ ಇನ್ನೂ 8 ರಿಂದ 9 ತಿಂಗಳು ಅವಕಾಶವಿದೆ. ಹೀಗಾಗಿ ಈಗ ಏಕೆ ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು? ಆಟಗಾರನಾಗಿ ಅಥವಾ ಬೇರೆ ಜವಾಬ್ದಾರಿಯ ಮೂಲಕವಾದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜತೆಗಿನ ನಂಟು ಯವಾಗಲೂ ಇದ್ದೇ ಇರುತ್ತದೆ” ಎಂದು ಧೋನಿ ಹೇಳಿದ್ದಾರೆ.
ಧೋನಿ ಅವರ ಈ ಮಾತನ್ನು ಕೇಳಿದ ಅವರ ಅಭಿಮಾನಿಗಳು ಕಪ್ ಗೆದ್ದಷ್ಟೇ ಸಂತಸ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಮತ್ತೊಮ್ಮೆ ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ ಎಂದು. ಧೋನಿ ಅವರ ಈ ಹೇಳಿಕೆಯಲ್ಲಿ ಮತ್ತೊಂದು ಸತ್ಯ ಕೂಡ ಅಡಗಿದೆ. ಅವರು ಚೆನ್ನೈ ಜತೆಗಿನ ನಂಟು ಮುಂದುವರಿಯುತ್ತದೆ ಎಂದು ಹೇಳಿದ್ದು ಆಟಗಾರನ ಬದಲಾಗಿ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಈ ಮಾತನ್ನು ಹೇಳಿದಂತೆ ತೋರುತ್ತಿದೆ. ಒಟ್ಟಾರೆ ನಿವೃತ್ತಿ ಬಗ್ಗೆ ಯೋಚಿಸಿಲ್ಲ ಎಂದಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.
ಇದನ್ನೂ ಓದಿ IPL 2023: ಪ್ರತಿ ಡಾಟ್ ಬಾಲ್ಗೆ 500 ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ ಬಿಸಿಸಿಐ
ಗಾಯದ ವಿಚಾರವಾಗಿ ಮಾತನಾಡಿದ ಧೋನಿ, ಇದು ನನಗೆ ಸಾಕಷ್ಟು ಕಾಟ ಕೊಟ್ಟಿದೆ. ಕಳೆದ ನಾಲ್ಕು ತಿಂಗಳುಗಳಿಂದ ನಾನು ಮನೆಯಿಂದ ಹೊರಗಡೆ ಇದ್ದೇನೆ. ಜನವರಿಯಿಂದ ನಾನು ಅಭ್ಯಾಸ ಮಾಡಲು ಆರಂಭಿಸಿದ್ದೆ. ಐಪಿಎಲ್ ಮುಗಿದ ತಕ್ಷಣ ನನ್ನ ಗಾಯಕ್ಕೆ ಸೂಕ್ತ ಚಿಕಿತ್ಸೆ ಪಡೆಯಲಿದ್ದೇನೆ. ಆದರೆ ನಿವೃತ್ತಿ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.