ಮುಂಬಯಿ: ಜನಪ್ರಿಯ ಟಾಕ್ ಶೋವೊಂದರಲ್ಲಿ ಭಾಗವಹಿಸಿದ್ದ ಕೆ.ಎಲ್. ರಾಹುಲ್ ತಮ್ಮ ಕ್ರಿಕೆಟ್ ಜೀವನದ ಏಳು-ಬೀಳುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದೇ ವೇಳೆ ಅವರು ಭಾರತಕ್ಕೆ 2 ವಿಶ್ವ ಕಪ್ ತಂದುಕೊಟ್ಟ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಕುರಿತು ಮಹತ್ವದ ವಿಚಾರವನ್ನು ಹೇಳಿದ್ದಾರೆ. ಧೋನಿ ಅವರು ನನ್ನ ಮೊದಲ ನಾಯಕ ಎಂದು ರಾಹುಲ್ ಹೇಳಿದ್ದಾರೆ.
ಬಲ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿರುವ ರಾಹುಲ್ ಅವರು ಬುಧವಾರ ಟಾಕ್ ಶೋವೊಂದರಲ್ಲಿ ಮಾತನಾಡಿದ ವೇಳೆ ಆರಂಭದಲ್ಲಿ ಟ್ರೋಲ್ಗಳಿಂದ ಉಂಟಾಗುವ ಖಿನ್ನತೆ ಬಗ್ಗೆ ಮಾಹಿತಿ ಹಂಚಿಕೊಂಡರು. ಇದಾದ ಬಳಿಕ ಧೋನಿ ನಾಯಕತ್ವದ ವಿಚಾರವಾಗಿ ಕೆಲ ಮಹತ್ವದ ವಿಚಾರವನ್ನು ಹೇಳಿದರು. “ನಾನು ಕೆಲ ಶ್ರೇಷ್ಠ ನಾಯಕರ ನಾಯಕತ್ವದಲ್ಲಿ ಆಡಿದ್ದೇನೆ. ಎಂ.ಎಸ್ ಧೋನಿ ಅವರು ನನ್ನ ಮೊದಲ ನಾಯಕ. ತಂಡದ ನಾಯಕ ಬೇರೆ ಯಾರೇ ಆಗಿರಲಿ ಆದರೆ ತಂಡವನ್ನು ಮುನ್ನಡೆಸುತ್ತಿದ್ದದ್ದು ಧೋನಿ ಅವರೇ” ಎಂದು ರಾಹುಲ್ ಹೇಳಿದರು.
“ಧೋನಿ ಅವರು ನಾಯಕತ್ವದಿಂದ ಕೆಳಗಿಳಿದಿದ್ದರೂ ಅವರು ಶಾಂತಮೂರ್ತಿಯಂತೆ ತಂಡವನ್ನು ಮುನ್ನಡೆಸುತ್ತಿದ್ದರು. ಈ ವಿಚಾರದಲ್ಲಿ ಕೊಹ್ಲಿ ಅದೃಷ್ಟವಂತ. ಏಕೆಂದರೆ ಅವರು ನಾಯಕತ್ವ ವಹಿಸಿದ ಸಂದರ್ಭದಲ್ಲಿ ಧೋನಿ ಅವರು ಭಾರತ ತಂಡದಲ್ಲಿ ಆಡುತ್ತಿದ್ದರು. ಜತೆಗೆ ನಾಯಕತ್ವದ ಗುಣವನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವ ಅತ್ಯಮೂಲ್ಯ ಸಲಹೆಯನ್ನು ನೀಡುತ್ತಿದ್ದರು. ಇದು ಕೊಹ್ಲಿಗೆ ವರದಾನವಾಯಿತು. ಧೋನಿ ಅವರು ಕೇವಲ ಪ್ಲೇಯಿಂಗ್ ಇಲೆವೆನ್ ಬಗ್ಗೆ ಮಾತ್ರ ಚಿಂತಿಸುತ್ತಿರಲಿಲ್ಲ. ಹೊರಗಿನ ಪ್ರತಿಯೊಬ್ಬ ಆಟಗಾರರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದರು. ಅಂತಹ ಬಾಂಧವ್ಯ ಏರ್ಪಟ್ಟರೇ ಮಾತ್ರ ಆಟಗಾರರು ತಂಡಕ್ಕಾಗಿ ಮತ್ತು ನಾಯಕನಿಗಾಗಿ ಪಂದ್ಯವನ್ನು ಗೆಲ್ಲಲೇ ಬೇಕೆಂಬ ಜಿದ್ದಿಗೆ ಬೀಳುತ್ತಿದ್ದರು ಎಂಬ ಸಲಹೆಯನ್ನು ನೀಡುತ್ತಿದ್ದರು’ ಎಂದು ಧೋನಿಯ ಗುಣವನ್ನು ರಾಹುಲ್ ನೆನಪಿಸಿಕೊಂಡರು.
ಇದನ್ನೂ ಓದಿ KL Rahul: ಶಸ್ತ್ರಚಿಕಿತ್ಸೆ ಬಳಿಕ ಊರುಗೋಲಿನ ಸಹಾಯದಿಂದ ನಡೆದಾಡಲು ಆರಂಭಿಸಿದ ರಾಹುಲ್
ಆರ್‌ಸಿಬಿ ಎದುರಿನ ಐಪಿಎಲ್ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ನಡೆಸುತ್ತಿದ್ದಾಗ ರಾಹುಲ್ ತೊಡೆಯ ನೋವಿಗೆ ಸಿಲುಕಿ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೇ ಕಾರಣದಿಂದ ಅವರು ಐಪಿಎಲ್ ಸೇರಿದಂತೆ ಮುಂದಿನ ತಿಂಗಳು ಇಂಗ್ಲೆಂಡ್ನಲ್ಲಿ ನಡೆಯಲಿರುವ ಆಸೀಸ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ರಾಹುಲ್ ಅವರ ಅನುಪಸ್ಥಿತಿಯಲ್ಲಿ ಲಕ್ನೋ ತಂಡವನ್ನು ಕೃಣಾಲ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಇನ್ನು ವಿಶ್ವ ಕಪ್ ಟೆಸ್ಟ್ಗೆ ರಾಹುಲ್ ಬದಲು ಇಶಾನ್ ಕಿಶಾನ್ ಅವರನ್ನು ಆಯ್ಕೆ ಮಾಡಲಾಗಿದೆ.