ಚೆನ್ನೈ: ಎಂ.ಎಸ್ ಧೋನಿ ಕ್ರಿಕೆಟ್ ಮೈದಾನದಲ್ಲಿ ಶಾಂತಿಯಿಂದ ವರ್ತಿಸುತ್ತಾರೆ. ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ ‘ಕ್ಯಾಪ್ಟನ್ ಕೂಲ್’ಎಂಬ ಹೆಸರು ಕೂಡ ಇದೆ. ಆದರೆ ಗುಜರಾತ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಅವರು ನಡೆದುಕೊಂಡ ಒಂದು ವರ್ತನೆಗೆ ಇದೀಗ ನೆಟ್ಟಿಗರು ಸೇರಿ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಕೂಡ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮಂಗಳವಾರದ ಈ ಕ್ವಾಲಿಫೈಯರ್-1 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಗುಜರಾತ್ ತಂಡ ಈ ಮೊತ್ತವನ್ನು ಬೆನ್ನಟ್ಟುವ ವೇಳೆ ಧೋನಿ ಅವರು ಅಂಪೈರ್ ಜತೆ ನಡೆಸಿದ ಮಾತುಕತೆಗೆ ಇದೀಗ ಹಲವರು ಆಕ್ಷೇಪ ಮತ್ತು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪಾಂಡ್ಯ ಪಡೆಯ ಚೇಸಿಂಗ್ನ 15ನೇ ಓವರ್ ಮುಕ್ತಾಯಗೊಂಡಿತ್ತು. ಈ ವೇಳೆ ಗುಜರಾತ್ 102 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿತ್ತು. 16ನೇ ಓವರ್ಗೂ ಮುನ್ನ ಧೋನಿ ಅವರು ಕೆಲ ಕಾಲ ಅಂಪೈರ್ ಜತೆ ಮಾತುಕತೆ ನಡೆಸುತ್ತಿರುವುದು ಕಂಡು ಬಂತು. ಪಂದ್ಯ ವೀಕ್ಷಿಸುತ್ತಿದ್ದ ಎಲ್ಲರೂ ಅರೆ ಧೋನಿ ಏಕೆ ಅಂಪೈರ್ ಜತೆ ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಅಷ್ಟಕ್ಕೂ ಧೋನಿ ಏನು ಮಾಡಿದ್ದಾರೆ? ಎಂಬ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಓಡಾಡುತ್ತಿದ್ದವು. ಆ ಬಳಿಕ ಧೋನಿ ಅವರು ಉದ್ದೇಶಪೂರ್ವಕವಾಗಿ ಸಮಯವನ್ನು ವ್ಯರ್ಥ ಮಾಡಲು ಈ ಉಪಾಯವನ್ನು ಮಾಡಿದ್ದಾರೆ ಎಂದು ತಿಳಿದು ಬಂತು.
ಅಷ್ಟಕ್ಕೂ ಧೋನಿ ಅವರು ಈ ರೀತಿ ಮಾಡಲು ಕಾರಣವೆಂದರೆ, ಮತೀಶ ಪತಿರಣ ಅವರು 9 ನಿಮಿಷಕ್ಕೂ ಹೆಚ್ಚು ಕಾಲ ಮೈದಾನದಿಂದ ಹೊರಗಿದ್ದರು. ಇದ್ದಕ್ಕಿದ್ದಂತೆ ಅವರು ಮೈದಾನ ಪ್ರವೇಶಿಸಿ 16ನೇ ಓವರ್ ಬೌಲಿಂಗ್ ಮಾಡಲು ಮುಂದಾದರು. ಆದರೆ ನಿಯಮದ ಪ್ರಕಾರ ಅವರು ಬೌಲಿಂಗ್ ನಡೆಸಲು ಮೈದಾನದ ಹೊರಗಿದ್ದಷ್ಟೆ ಸಮಯವನ್ನು ಮೈದಾನದಲ್ಲಿಯೂ ಕಳೆಯಬೇಕಿತ್ತು. ಇದೇ ಕಾರಣಕ್ಕೆ ಅಂಪೈರ್ ಅವರು ಪತಿರಣಗೆ ಬೌಲಿಂಗ್ ನಡೆಸಲು ಅವಕಾಶ ನೀಡಲಿಲ್ಲ. ಈ ವೇಳೆ ಧೋನಿ ಅವರು ಜಾಣ ನಡೆಯನ್ನು ಅನುಸರಿಸಿ ಸಮಯ ಕಳೆಯಲು ಅಂಪೈರ್ ಜತೆ ಮಾತುಕತೆಗೆ ಇಳಿದು ಈ ಸಮಯವನ್ನು ಕವರ್ ಮಾಡಿದರು. ಇದೀಗ ಧೋನಿ ಅವರ ಈ ನಡೆಗೆ ಹಲವುರು ಟೀಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ಸತತ ಎರಡು ಶತಕ ಬಾರಿಸಿದ ಆಟಗಾರರು ಯಾರು? ಇಲ್ಲಿದೆ ಮಾಹಿತಿ
ಅಚ್ಚರಿ ಎಂದರೆ ಕೆಲ ದಿನಗಳ ಹಿಂದೆ ಮೈದಾನಕ್ಕೆ ಓಡೋಡಿ ಬಂದು ತಾವು ಧರಿಸಿದ್ದ ಶರ್ಟ್ ಮೇಲೆ ಸಹಿ ಪಡೆದು ಧೋನಿಯನ್ನು ಹೊಗಳಿದ್ದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಕೂಡ ಈ ವರ್ತನೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ‘ಅಂಪೈರ್ ತಪ್ಪು ನಿರ್ಧಾರ ನೀಡಿದರೂ ಹಲವು ಭಾರಿ ನೀವು ಇದನ್ನು ಒಪ್ಪಿಕೊಂಡಿದ್ದೀರಿ, ಆದರೆ ನಿರ್ಧಾರ ಸರಿಯಿದ್ದಾಗ ಅದನ್ನು ಪ್ರಶ್ನಿಸಲು ಹೋಗಬಾರದು ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಧೋನಿಯ ಈ ನಡೆಯನ್ನು ಖಂಡಿಸಿದ್ದಾರೆ. ಇನ್ನು ಕೆಲವರು ಧೋನಿ ಅವರಿಂದ ಇದನ್ನೂ ನಿರೀಕ್ಷಿಸಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.