ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರಂತೆ ಫಿನಿಶರ್ ಪಾತ್ರವನ್ನು ಯಾರೂ ನಿರ್ವಹಿಸಲು ಸಾಧ್ಯವಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ ರಿಯಾನ್ ಪರಾಗ್(riyan parag) ಹೇಳಿದ್ದಾರೆ.
16ನೇ ಆವೃತ್ತಿಯ ಐಪಿಎಲ್ ಟೂರ್ನಿ ಶುಕ್ರವಾರ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟಾನ್ಸ್ ಮತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ಧೋನಿ ಅವರ ಅಪ್ಪಟ ಅಭಿಮಾನಿಯಾಗಿರುವ ರಿಯಾನ್ ಪರಾಗ್, ನಾನು ಕೂಡ ಧೋನಿಯಂತೆ ಫಿನಿಶರ್ ರೋಲ್ ನಿರ್ವಹಿಸಲು ಬಯಸುತ್ತಿದ್ದೇನೆ ಆದರೆ ಅವರಂತೆ ಗ್ರೇಟ್ ಫಿನಿಶರ್ ಆಗಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ IPL 2023: ಬಹುನಿರೀಕ್ಷಿತ ಐಪಿಎಲ್ ಟೂರ್ನಿಗೆ ಕ್ಷಣಗಣನೆ; ಈ ಬಾರಿ ಟೂರ್ನಿಯ ಮಾದರಿ ಹೇಗಿದೆ?
“ಕಳೆದ ಮೂರು ವರ್ಷಗಳಿಂದ ನಾನು ಫಿನಿಶಿಂಗ್ ಪಾತ್ರ ನಿಭಾಯಿಸುತ್ತಿದ್ದೇನೆ. ಫಿನಿಶಿಂಗ್ ವಿಚಾರಕ್ಕೆ ಬಂದಾಗ ನನ್ನ ನೆನಪಿಗೆ ಬರುವ ಒಂದೇ ಒಂದು ಹೆಸರು ಎಂದರೆ ಅದು ಧೋನಿ ಸರ್, ಈ ಹಿಂದೆಯೂ ಇದನ್ನೇ ಹೇಳಿದ್ದೆ. ಧೋನಿ ಹೊರತುಪಡಿಸಿ ಫಿನಿಶಿಂಗ್ ಕಲೆಯನ್ನು ಬೇರೆ ಯಾರೂ ಉತ್ತಮವಾಗಿ ನಿರ್ವಹಿಸಲು ಸಾಧ್ಯವಿಲ್ಲ. ನಾನು ಕೂಡ ಅವರಂತೆ ಆಗಲು ಪ್ರಯತ್ನಿಸುತ್ತಿದ್ದೇನೆ” ಎಂದು ಪರಾಗ್ ಅಭಿಪ್ರಾಯಪಟ್ಟರು.
ತಮ್ಮ ಆಟದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಅವರು, “ಈ ಋತುವಿನ ದೇಶಿಯಾ ಕ್ರಿಕೆಟ್ ಟೂರ್ನಿಗಳಲ್ಲಿ ನಾನು ಬ್ಯಾಟಿಂಗ್ ಜತೆಗೆ ಸಾಕಷ್ಟು ಬೌಲಿಂಗ್ ಮಾಡಿದ್ದೇನೆ. ಇದರಿಂದ ಬೌಲಿಂಗ್ನಲ್ಲಿಯೂ ದೊಡ್ಡ ಮಟ್ಟದ ಸುಧಾರಣೆಯಾಗಿದೆ. ಆದ್ದರಿಂದ ನಾನು ಈ ಬಾರಿ ಆಲ್ರೌಂಡರ್ ಪ್ರದರ್ಶ ತೋರಲಿದ್ದೇನೆ” ಎಂದು ತಿಳಿಸಿದರು.
2018ರ ಅಂಡರ್-19 ವಿಶ್ವಕಪ್ ವಿಜೇತ ತಂಡದಲ್ಲಿ ಸ್ಥಾನ ಪಡೆದಿದ್ದ ಪರಾಗ್ ಅವರು 2022-23ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಐದನೇ ಅತಿ ಹೆಚ್ಚು ರನ್ಗಳಿಸಿದ್ದ ಆಟಗಾರರಾಗಿದ್ದರು. 69 ಸರಾಸರಿಯೊಂದಿಗೆ 552 ರನ್ಗಳನ್ನು ಗಳಿಸಿದ್ದ ಪರಾಗ್ ಮೂರು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ20 ಟ್ರೋಫಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 253 ರನ್ ಗಳಿಸಿದ್ದರು. ಇದೀಗ 16ನೇ ಆವೃತ್ತಿಯ ಐಪಿಎಲ್ನಲ್ಲಿ ಮಿಂಚಲು ಕಾತರರಾಗಿದ್ದಾರೆ.
ಇದನ್ನೂ ಓದಿ IPL 2023: ಗುರು ಶಿಷ್ಯರ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಶುಭಾರಂಭ
ಐಪಿಎಲ್ಗೆ ವಿದಾಯ ಹೇಳಲಿದ್ದಾರಾ ಧೋನಿ?
ಈ ಬಾರಿಯ ಐಪಿಎಲ್ ಬಳಿಕ ಧೋನಿ(ms dhoni) ಅವರು ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಲಾರಂಭಿಸಿದೆ. ಆದರೆ ಈ ಬಗ್ಗೆ ಧೋನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯಕ್ಕೆ ಧೋನಿ ಅವರು ಹಲವು ದಾಖಲೆಗಳನ್ನು ನಿರ್ಮಿಸುತ್ತ ಚಿತ್ತ ನೆಟ್ಟಿದ್ದಾರೆ.
5000 ರನ್ ಸನಿಹದಲ್ಲಿ ಧೋನಿ
ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರು ಈ ವರೆಗೆ 234 ಪಂದ್ಯಗಳಿಂದ 4978 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಅವರು 22 ರನ್ ಗಳಿಸಿದರೆ 5 ಸಾವಿರ ರನ್ ಪೂರೈಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆಯಲಿದ್ದಾರೆ. ಇದರ ಜತೆಗೆ 185 ರನ್ ಬಾರಿಸಿದರೆ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ (5162) ಅವರನ್ನು ಹಿಂದಿಕ್ಕಲಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ 6ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಸಿಕ್ಸರ್ ದಾಖಲೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಯುನಿವರ್ಸ್ ಬಾಸ್ ಖ್ಯಾತಿಯ ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ ಅವರು 357 ಸಿಕ್ಸರ್ಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಸದ್ಯ ಧೋನಿ 229 ಸಿಕ್ಸರ್ ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಬಾರಿ ಅವರು 23 ಸಿಕ್ಸ್ ಸಿಡಿಸಿದರೆ 250 ಸಿಕ್ಸರ್ ಕ್ಲಬ್ಗೆ ಸೇರುವ ಜತೆಗೆ ಎಬಿಡಿ ಅವರ ದಾಖಲೆಯನ್ನು ಮುರಿಯಲಿದ್ದಾರೆ ಎಬಿಡಿ 251 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 240 ಸಿಕ್ಸರ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ ಅವರಿಗೂ ಎಬಿಡಿ ಅವರ ದಾಖಲೆ ಮುರಿಯುವ ಅವಕಾಶವಿದೆ.
250ನೇ ಐಪಿಎಲ್ ಪಂದ್ಯ
ಐಪಿಎಲ್ನ ಇದುವರೆಗಿನ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯವನ್ನಾಡಿದ ದಾಖಲೆ ಧೋನಿ ಹೆಸರಿನಲ್ಲಿದೆ. ಸದ್ಯ ಅವರು 234 ಪಂದ್ಯಗಳನ್ನಾಡಿದ್ದಾರೆ. ಈ ಬಾರಿ ಅವರು 16 ಪಂದ್ಯಗಳಲ್ಲಿ ಆಡಿದರೆ 250 ಪಂದ್ಯಗಳನ್ನು ಪೂರೈಸಿದ ಮೊದಲ ಆಟಗಾರ ಎಂಬ ಮೈಲುಗಲ್ಲು ಸ್ಥಾಪಿಸಲಿದ್ದಾರೆ. ಆರ್‌ಸಿಬಿ ಆಟಗಾರ ದಿನೇಶ್ ಕಾರ್ತಿಕ್ 229 ಪಂದ್ಯಗಳನ್ನಾಡಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಈ ಬಾರಿಯೂ ಅವರು ಆಡುತ್ತಿರುವ ಕಾರಣ ಪಂದ್ಯಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.