ಚೆನ್ನೈ: 16 ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಗೆ ಇನ್ನೆರಡು ದಿನಗಳಲ್ಲಿ ಚಾಲನೆ ದೊರೆಯಲಿದೆ. ಶುಕ್ರವಾರ ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್(GT) ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯಕ್ಕಾಗಿ ಮಹೇಂದ್ರ ಸಿಂಗ್ ಧೋನಿ(MS Dhoni) ಚೆಪಾಕ್ ಮೈದಾನದಲ್ಲಿ ಅಭ್ಯಾಸ ನಡೆಸಿದ ವಿಡಿಯೊವೊಂದು ಭಾರಿ ವೈರಲ್ ಆಗಿದೆ.
ಈ ಬಾರಿಯ ಐಪಿಎಲ್ ಬಳಿಕ ಧೋನಿ ನಿವೃತ್ತಿ ನೀಡಲಿದ್ದಾರೆ ಎಂದು ಈಗಾಗಲೇ ಹಲವು ವರದಿಗಳು ಖಚಿತಪಡಿಸಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಾದ ಧೋನಿ ಆಟವನ್ನು ನೋಡುವ ಸಲುವಾಗಿ ಈಗಾಗಲೇ ಚೆನ್ನೈ ಪಂದ್ಯದ ಟಿಕೆಟ್ಗಳನ್ನು ಖರೀದಿಸಿದ್ದಾರೆ. ಟಿಕೆಟ್ ಸಿಗದ ಕೆಲ ಅಭಿಮಾನಿಗಳು ಧೋನಿ ಅಭ್ಯಾಸ ನಡೆಸುವುದನ್ನು ನೋಡಲು ಚೆಪಾಕ್ ಸ್ಟೇಡಿಯಂಗೆ ಆಗಮಿಸಿದ್ದಾರೆ. ಪಂದ್ಯ ನಡೆಯುವ ವೇಳೆ ಸ್ಟೇಡಿಯಂ ಭರ್ತಿಗೊಂಡಂತೆ ಧೋನಿ ಅವರ ಅಭ್ಯಾಸ ನೋಡಲು ಜನರು ಆಗಮಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆಪಾಕ್ನಲ್ಲಿ ಧೋನಿ ವಿದಾಯ!
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಧೋನಿ ವಿದಾಯದ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಈಗಾಗಲೇ ಫ್ರಾಂಚೈಸಿಯ ಮೂಲಗಳು ಮಾಹಿತಿ ನೀಡಿದೆ. ಮೇ 14 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತವರಿನಲ್ಲಿ ಚೆನ್ನೈ ತಂಡ ಅಂತಿಮ ಲೀಗ್ ಪಂದ್ಯ ಆಡಲಿದೆ. ಒಂದೊಮ್ಮೆ ಸಿಎಸ್ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯದಿದ್ದರೆ ಈ ಪಂದ್ಯದಲ್ಲಿಯೇ ಧೋನಿ ತವರಿನ ಅಭಿಮಾನಿಗಳ ಮುಂದೆ ವಿದಾಯ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.
ಮಹೇಂದ್ರ ಸಿಂಗ್ ಧೋನಿ ಅವರು ನವೆಂಬರ್ 2021 ರಲ್ಲಿ ತನ್ನ ಕೊನೆಯ ಟಿ20 ಪಂದ್ಯವನ್ನು ಚೆನ್ನೈನಲ್ಲಿ ಆಡುವುದು ಎಂದು ಹೇಳಿದ್ದರು. ಅದರಂತೆ ಮೇ 14ರಂದು ಚೆನ್ನೈನಲ್ಲಿ ಧೋನಿ ಕೊನೆಯ ಪಂದ್ಯ ಆಡಲಿದ್ದಾರೆ ಎನ್ನಲಾಗುತ್ತಿದೆ