ಚೆನ್ನೈ: ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಸೋಮವಾರ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್(IPL 2023) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಸಿಡಿಸಿದ ಅವಳಿ ಸಿಕ್ಸರ್‌ಗಳು ಜಿಯೋ ಸಿನಿಮಾದಲ್ಲಿ(JioCinema) 1.7 ಕೋಟಿ ವೀಕ್ಷಣೆ ಕಾಣುವ ಮೂಲಕ ನೂತನ ದಾಖಲೆ ನಿರ್ಮಿಸಿದೆ.
16ನೇ ಆವೃತ್ತಿಯ ಐಪಿಎಲ್ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಬ್ಯಾಟಿಂಗ್‍ನಲ್ಲಿ ಅಬ್ಬರಿಸಿದ್ದ ಧೋನಿ ಆಟವನ್ನು ಜಿಯೋ ಸಿನಿಮಾದಲ್ಲಿ 1.6 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿದ್ದ ಪಂದ್ಯವಾಗಿತ್ತು. ಆದರೆ ಈಗ ಈ ದಾಖಲೆ ಮುರಿದಿದೆ.
ಲಕ್ನೋ ವಿರುದ್ಧದ ಪಂದ್ಯದ ಅಂತಿಮ ಓವರ್ನಲ್ಲಿ ಕ್ರೀಸ್‍ಗೆ ಆಗಮಿಸಿದ ಧೋನಿ ಎದುರಾಳಿ ತಂಡದ ವೇಗಿ ಮಾರ್ಕ್‍ವುಡ್ ಎಸೆದ 3 ಎಸೆತಗಳಿಗೆ ಎರಡು ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ನ ವೀಡಿಯೊ ಜಿಯೋ ಸಿನಿಮಾದಲ್ಲಿ 1.7 ಕೋಟಿ ವೀಕ್ಷಣೆ ಕಂಡಿದೆ.
ಇದನ್ನೂ ಓದಿ IPL 2023: ಗುಜರಾತ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಡೆಲ್ಲಿ ಕ್ಯಾಪಿಟಲ್ಸ್
5 ಸಾವಿರ ರನ್ ಪೂರೈಸಿದ ಧೋನಿ
ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎಂಟು ರನ್ ಬಾರಿಸಿದ ತಕ್ಷಣ ಐಪಿಎಲ್ನಲ್ಲಿ 5000 ರನ್ಗಳನ್ನು ಬಾರಿಸಿದ ದಾಖಲೆ ಮಾಡಿದರು. ಪಂದ್ಯದಲ್ಲಿ ಅವರು 12 ರನ್ ಬಾರಿಸಿರುವ ಕಾರಣ ಅವರ ಒಟ್ಟು ಗಳಿಕೆ 5004ಕ್ಕೆ ಏರಿದೆ. ಅವರೀಗ ಈ ಮೈಲುಗಲ್ಲು ಸ್ಥಾಪಿಸಿದ ಏಳನೇ ಆಟಗಾರ ಎನಿಸಿಕೊಂಡಿದ್ದಾರೆ.
ಧೋನಿಗಿಂತ ಮೊದಲು ವಿರಾಟ್ ಕೊಹ್ಲಿ, ಶಿಖರ್ ಧವನ್, ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ಎಬಿಡಿ ವಿಲಿಯರ್ಸ್ ಐದು ಸಾವಿರ ರನ್ಗಳ ದಾಖಲೆ ಮಾಡಿದ್ದರು. ಇದೀಗ ರೋಹಿತ್ ಶರ್ಮಾ ಶೀ ದಾಖಲೆ ಮಾಡಿದ ಐದನೇ ಭಾರತೀಯ ಬ್ಯಾಟರ್. ಐಪಿಎಲ್ನಲ್ಲಿ 5000 ರನ್ಗಳ ಗಡಿ ದಾಟಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ 224 ಪಂದ್ಯಗಳಲ್ಲಿ ಆಡಿದ್ದು, 5 ಶತಕ ಹಾಗೂ 45 ಅರ್ಧ ಶತಕಗಳ ನೆರವಿನಿಂದ 6706 ರನ್ ಬಾರಿಸಿದ್ದಾರೆ.
ಬೌಲರ್ಗಳಿಗೆ ಎಚ್ಚರಿಕೆ ನೀಡಿದ ಧೋನಿ
“ನಮ್ಮ ತಂಡದ ಬೌಲರ್ಗಳು ಸುಧಾರಿಸಿಕೊಳ್ಳಬೇಕಿದೆ. ಈ ಬೌಲಿಂಗ್ ಪ್ರದರ್ಶನವನ್ನು ಕಟ್ಟಿಕೊಂಡು ತಂಡ ಗೆಲ್ಲುವುದು ಅಸಾಧ್ಯ. ಬ್ಯಾಟಿಂಗ್‍ನಲ್ಲಿ ನಮ್ಮ ತಂಡ ಬಲಿಷ್ಠವಾಗಿದೆ. ಆದರೆ ಬೌಲಿಂಗ್ ತುಂಬಾನೆ ಕಳಪೆ ಮಟ್ಟದಿಂದ ಕೂಡಿದೆ. ಮುಂದಿನ ಪಂದ್ಯದಲ್ಲಿ ಇದು ಆವರ್ತಿಸಬಾರದು. ಒಂದೊಮ್ಮೆ ಇದೇ ಪ್ರದರ್ಶನ ಮುಂದುವರಿದರೆ ತಂಡ ನೂತನ ನಾಯಕನನ್ನು ಕಾಣಲಿದೆ. ನನ್ನ ನಾಯಕತ್ವದಲ್ಲಿ ಈ ರೀತಿಯ ಬೌಲಿಂಗ್ಗೆ ಅವಕಾಶವಿಲ್ಲ” ಎಂದು ಧೋನಿ ತಂಡದ ಬೌಲರ್ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.