ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯ ಸುತ್ತಿದ ಆರ್ಸಿಬಿ ತಂಡದ ಆಟಗಾರ ದಿನೇಶ್ ಕಾರ್ತಿಕ್ ಅವರು, ಐಪಿಎಲ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶೂನ್ಯ ಸುತ್ತಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮ ಜತೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ.
ಜೈಪುರದ ಮಾನ್ಸಿಂಗ್ ಸವಾಯ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾನುವಾರ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ರಾಯಲ್ ಚಾಜೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ 10.3 ಓವರ್ಗಳಲ್ಲಿ 59 ರನ್ ಗಳಿಸಿ ಸರ್ವಪತನ ಕಂಡಿತು. ಆರ್ಸಿಬಿ 112 ರನ್ಗಳಿಂದ ಗೆದ್ದು ಪ್ಲೇ ಆಫ್ ಆಸೆ ಜೀವಂತವಿರಿಸಿದೆ.
ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ ಆರಂಭದಲ್ಲೇ ಬಿರುಸಿನ ಆಟಕ್ಕೆ ಒಗ್ಗಿಕೊಂಡರು. ಈ ಪರಿಣಾಮ ತಂಡದ ರನ್ ಗಳಿಕೆಯು ಪ್ರಗತಿ ಕಂಡಿತು. ಜತೆಗೆ ಅರ್ಧಶತಕವೂ ಬಾರಿಸಿ ಮಿಂಚಿದರು. ಡು ಪ್ಲೆಸಿಸ್ ನಿಧಾನಗತಿಯಲ್ಲೇ ಸಾಗಿ 41 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಮ್ಯಾಕ್ಸ್ವೆಲ್(54) ಮತ್ತು ಡು ಪ್ಲೆಸಿಸ್(55) ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಮಹಿಪಾಲ್ ಲೋಮ್ರೋರ್ ಅವರ ಬಳಿಕ ಆಡಲಿಳಿದ ದಿನೇಶ್ ಕಾರ್ತಿಕ್ ಅವರು 2 ಎಸೆತ ಎದುರಿಸಿ ಶೂನ್ಯ ಸುತ್ತಿದರು. ಈ ವೇಳೆ ಅವರು ಐಪಿಎಲ್ನಲ್ಲಿ ಅತ್ಯಧಿಕ ಶೂನ್ಯ ಸಂಪಾದಿಸಿದ ಪಟ್ಟಿಯಲ್ಲಿ ರೋಹಿತ್ ಜತೆ ಜಂಟಿ ಅಗ್ರಸ್ಥಾನ ಪಡೆದರು. ಸದ್ಯ ಉಭಯ ಆಟಗಾರರು 16 ಬಾರಿ ಐಪಿಎಲ್ನಲ್ಲಿ ಶೂನ್ಯ ಸುತ್ತಿದ್ದಾರೆ. ಈ ಕೆಟ್ಟ ದಾಖಲೆ ಬರೆದವರ ಪಟ್ಟಿಯಲ್ಲಿ ಸುನೀಲ್ ನಾರಾಯಣ್ ಮತ್ತು ಮನ್ದೀಪ್ ಸಿಂಗ್ ಜಂಟಿಯಾಗಿ ದ್ವಿತೀಯ ಸ್ಥಾನದಲ್ಲಿದ್ದಾರೆ ಅವರು 15 ಬಾರಿ ಶೂನಕ್ಕೆ ಔಟಾಗಿದ್ದಾರೆ.
ದಿನೇಶ್ ಕಾರ್ತಿಕ್ ಅವರು ಈ ಋತುವಿನ ಐಪಿಎಲ್ನಲ್ಲಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡುತ್ತಿಲ್ಲ. ಪದೇ ಪದೇ ಡಕ್ ಔಟ್ ಆಗುತ್ತಿದ್ದಾರೆ. ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ಅವರು ಮುಂಬರುವ ಪಂದ್ಯದಲ್ಲಿ ಆಡುವುದು ಅನುಮಾನ. ಒಂದೊಮ್ಮೆ ಅವರು ಆಡಿದರು ಇದು ಅವರಿಗೆ ಕೊನೆಯ ಐಪಿಎಲ್ ಪಂದ್ಯವಾಗುವ ಸಾಧ್ಯತೆ ಇದೆ. ಮುಂಬರುವ ಸೀಸನ್ನಲ್ಲಿ ಅವರನ್ನು ತಂಡದಿಂದ ಕೈಬಿಟ್ಟುವುದು ಈಗಾಗಲೇ ಬಹುತೇಕ ಖಚಿತವಾದಂತಿದೆ.