ಜೈಪುರ: ಅಗ್ರಸ್ಥಾನಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ನ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್ಜೈಂಟ್ಸ್ 10 ರನ್ಗಳ ಗೆಲುವು ದಾಖಲಿಸಿ 8 ಅಂಕ ಸಂಪಾದಿಸಿದೆ. ಆದರೆ ಈ ಪಂದ್ಯದಲ್ಲಿ ನಿಧಾನಗತಿಯ ಓವರ್-ರೇಟ್ ಕಾಯ್ದುಕೊಂಡ ಕಾರಣ ಕೆ.ಎಲ್. ರಾಹುಲ್ಗೆ(kl rahul) ದಂಡ ವಿಧಿಸಲಾಗಿದೆ.
ಬುಧವಾರ ರಾತ್ರಿ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಪೇರಿಸಿತು. ಜವಾಬಿತ್ತ ರಾಜಸ್ಥಾನ್ ತನ್ನ ಪಾಲಿನ ಆಟದಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಲಷ್ಟೇ ಶಕ್ತವಾಯಿತು. ಸಣ್ಣ ಮೊತ್ತವನ್ನು ಉಳಿಸಿಕೊಳ್ಳವಲ್ಲಿ ಲಕ್ನೋ ರಾಜಸ್ಥಾನ್ ವಿರುದ್ಧ ಗೆದ್ದು ರಾಜನಂತೆ ಮೆರೆದಾಡಿತು.
ಪಂದ್ಯ ಗೆದ್ದ ಖುಷಿಯಲ್ಲಿದ್ದ ನಾಯಕ ರಾಹುಲ್ಗೆ ಇದೀಗ ದಂಡದ ಶಾಕ್ ಬಿದ್ದಿದೆ. ನಿಗದಿತ ಸಮಯದ ಒಳಗೆ ಓವರ್ ಮುಕ್ತಾಯಗೊಳಿಸದ ಕಾರಣ ಅವರಿಗೆ 12 ಲಕ್ಷ ರೂ. ದಂಡ ವಿಧಿಸಿದೆ. ಐಪಿಎಲ್ನ ಕೋಡ್ ಆಫ್ ಕಂಡಕ್ಟ್ಅಪರಾಧವನ್ನು ರಾಹುಲ್ ಒಪ್ಪಿಕೊಂಡಿದ್ದಾರೆ. ಇದನ್ನು ಉಲ್ಲಂಸಿದರೆ, ಪಂದ್ಯದ ರೆಫ್ರಿ ನಿರ್ಧಾರವು ಅಂತಿಮ ಮತ್ತು ಅದಕ್ಕೆ ಆಟಗಾರರು ಬದ್ಧರಾಗಿರಬೇಕಾಗಿದೆ ಎಂದು ಐಪಿಎಲ್ ಹೇಳಿಕೆ ತಿಳಿಸಿದೆ.
ರಾಹುಲ್ ಬ್ಯಾಟಿಂಗ್ ಬಗ್ಗೆ ಪೀಟರ್ಸನ್ ಬೇಸರ
ಈ ಪಂದ್ಯದಲ್ಲಿ ರಾಹುಲ್ ಅವರು ಪವರ್ ಪ್ಲೇಯಲ್ಲಿ ಆಡಿದ ರೀತಿಗೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಬೇಸರ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ರಿ ಮಾಡುತ್ತಿದ್ದ ಪೀಟರ್ಸನ್ ಅವರು ಪವರ್ ಪ್ಲೇಯಲ್ಲಿ ರಾಹುಲ್ ಬ್ಯಾಟಿಂಗ್ ನೋಡಲು ಅತ್ಯಂತ ಬೇಸರವಾಗುತ್ತಿದೆ. ಅವರ ನೈಜ ಆಟ ಇದಲ್ಲ ಎಂದು ಹೇಳಿದರು. ಅಂತೆಯೇ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ರಾಹುಲ್ ಬ್ಯಾಟಿಂಗ್ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಐಪಿಎಲ್ ಟೂರ್ನಿಗೆ ಸೂಕ್ತವಾದ ಬ್ಯಾಟಿಂಗ್ ಅಲ್ಲ ಎಂದು ಹೇಳಿದ್ದಾರೆ.