ಬೆಂಗಳೂರು: 16ನೇ ಆವೃತ್ತಿಯ ಐಪಿಎಲ್ನ(IPL 2023) ಪ್ರತಿ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಕಲೆಹಾಕುತ್ತಿರುವ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ಗೆ, ಮತ್ತೆ ದಕ್ಷಿಣ ಆಫ್ರಿಕಾ ತಂಡದ ಪರ ಆಡುವಂತೆ ಆಫರ್ ಬಂದಿದೆ. ಈ ವಿಚಾರವನ್ನು ಸ್ವತಃ ಡು ಪ್ಲೆಸಿಸ್ ತಿಳಿಸಿದ್ದಾರೆ. ನಿವೃತ್ತಿಯನ್ನು ಹಿಂಪಡೆದು ಮತ್ತೆ ಟಿ20 ಕ್ರಿಕೆಟ್ ಆಡುವಂತೆ ತಂಡದ ಕೋಚ್ ಬಾಬ್ ವಾಲ್ಟರ್ ಕೇಳಿಕೊಂಡಿದ್ದಾರೆ ಎಂದು ಡು ಪ್ಲೆಸಿಸ್ ಹೇಳಿದ್ದಾರೆ.
ಸದ್ಯ ಆರ್ಸಿಬಿ ಪರ 13 ಪಂದ್ಯಗಳನ್ನು ಆಡಿರುವ ಡು ಪ್ಲೆಸಿಸ್ 702 ರನ್ ಗಳಿಸಿದ್ದಾರೆ. ಕಳೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಜತೆಗೂಡಿ ಉತ್ತಮ ಜತೆಯಾಟ ನಡೆಸಿದ್ದರು. ಈ ಪಂದ್ಯದಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿ ಸಿಡಿಸಿದ ಅವರು 71 ರನ್ ಬಾರಿಸಿದರು.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಡು ಪ್ಲೆಸಿಸ್ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವ ಕಪ್ನಲ್ಲಿ ತಂಡದ ಪರ ಆಡುವಂತೆ ಆಫರ್ ಬಂದಿದೆ. ಆದರೆ ಫಿಟ್ನೆಸ್ ಮೇಲೆ ಎಲ್ಲವೂ ಅಲಂಬಿತವಾಗಿದೆ ಎಂದು ಹೇಳಿದರು. ಈ ಹಿಂದೆ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿದ್ದ ಡು ಪ್ಲೆಸಿಸ್ ಕಳೆದ ವರ್ಷ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದೀಗ ಅವರ ಬ್ಯಾಟಿಂಗ್ ಕಂಡು ಮತ್ತೆ ರಾಷ್ಟ್ರೀಯ ತಂಡದ ಪರ ಆಡುವಂತೆ ತಂಡದ ಕೋಚ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ IPL 2023: ಲಕ್ನೋಗೆ ಕೆಕೆಆರ್ ಎದುರಾಳಿ; ವಿಶೇಷ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಪಾಂಡ್ಯ ಪಡೆ
ಡು ಪ್ಲೆಸಿಸ್ ಅವರ ನಾಯಕತ್ವದಲ್ಲಿ ಆರ್ಸಿಬಿ ಚೊಚ್ಚಲ ಕಪ್ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ. ಸದ್ಯ ಆರ್ಸಿಬಿ 14 ಅಂಕದೊಂದಿಗೆ ಪ್ಲೇ ಆಫ್ ಬಾಗಿಲಿಗೆ ಬಂದು ನಿಂತಿದೆ. ತವರಿನಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ತಂಡದ ವಿರುದ್ಧ ಗೆದ್ದರೆ ಆರ್ಸಿಬಿ ಪ್ಲೇ ಆಫ್ ಪ್ರವೇಶ ಗಿಟ್ಟಿಸಿಕೊಳ್ಳಲಿದೆ.
ಪಂದ್ಯ ಗೆದ್ದ ಆರ್ಸಿಬಿ
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ಹೆನ್ರಿಕ್ ಕ್ಲಾಸೆನ್ ಅವರ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಆರ್ಸಿಬಿ ವಿರಾಟ್ ಕೊಹ್ಲಿಯ ಶತಕ ಮತ್ತು ಡು ಪ್ಲೆಸಿಸ್ ಅವರ ಅರ್ಧಶತಕದ ನೆರವಿನಿಂದ 19.2 ಓವರ್ಗಳಲ್ಲಿ 187 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಸದ್ಯ ಆರ್ಸಿಬಿ 14 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಮೇ 21ರಂದು ನಡೆಯುವ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಆರ್ಸಿಬಿ ಪ್ಲೇ ಆಫ್ ಪ್ರವೇಶ ಪಡೆಯಲಿದೆ.