ಮುಂಬಯಿ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿಯುವ ಮೂಲಕ ದಕ್ಷಿಣ ಆಫ್ರಿಕಾದ ಬೌಲರ್ ಡುವಾನ್ ಜಾನ್ಸೆನ್ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪಾದರ್ಪಣೆ ಮಾಡಿದರು. ಇದೇ ವೇಳೆ ಐಪಿಎಲ್ ಇತಿಹಾಸದಲ್ಲಿ ವಿಶೇಷ ದಾಖಲೆಯೊಂದು ನಿರ್ಮಾಣವಾಯಿತು.
ದಕ್ಷಿಣ ಆಫ್ರಿಕಾದ ಡುವಾನ್ ಜಾನ್ಸೆನ್ ಮತ್ತು ಮಾರ್ಕೊ ಜಾನ್ಸೆನ್ ಜೋಡಿಯು ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಕಾಣಿಸಿಕೊಂಡ ಮೊದಲ ಅವಳಿ ಸಹೋದರರು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದುವರೆಗೆ ಐಪಿಎಲ್ ಟೂರ್ನಿಯಲ್ಲಿ ಹಲವು ಸಹೋದರರು ಕಣಕ್ಕಿಳಿದಿದ್ದರೂ ಅವಳಿ ಸಹೋದರರು ಆಡಿರಲಿಲ್ಲ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಡುವಾನ್ ಜಾನ್ಸೆನ್ ತಮ್ಮ ಚೊಚ್ಚಲ ಪಂದ್ಯದಲ್ಲಿ ನಾಲ್ಕು ಓವರ್‌ಗಳನ್ನು ಎಸೆದು 53 ರನ್ ವೆಚ್ಚದಲ್ಲಿ 1 ವಿಕೆಟ್ ಪಡೆದರು. ಸ್ವಾರಸ್ಯವೆಂದರೆ ಇವರ ಸಹೋದರ ಮಾರ್ಕೊ ಜಾನ್ಸೆನ್ ಕೂಡ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಐಪಿಎಲ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದರೊಂದಿಗೆ ಅವಳಿ ಸಹೋದರರು ಒಂದೇ ತಂಡದ ಪರ ಐಪಿಎಲ್ ಪದಾರ್ಪಣೆ ಮಾಡಿಯೂ ವಿಶೇಷ ದಾಖಲೆ ಬರೆದರು.
ಈ ಬಾರಿಯ ಆವೃತ್ತಿಯಲ್ಲಿ ಮಾರ್ಕೊ ಜಾನ್ಸೆನ್ ಅವರು ಸನ್ರೈರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. ಅವರು ಒಟ್ಟು 12 ಐಪಿಎಲ್ ಪಂದ್ಯಗಳನ್ನು ಆಡಿ 13 ವಿಕೆಟ್ ಪಡೆದಿದ್ದಾರೆ. ಈ ಆವೃತ್ತಿಯಲ್ಲಿ ಹೈದರಾಬಾದ್ ಪರ 2 ಪಂದ್ಯಗಳನ್ನು ಆಡಿರುವ ಮಾರ್ಕೊ ಜಾನ್ಸೆನ್ ಒಟ್ಟು ನಾಲ್ಕು ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ IPL 2023: ಸೂರ್ಯಕುಮಾರ್, ನಿತೀಶ್ ರಾಣಾ, ಶೋಕೀನ್ಗೆ ದಂಡದ ಬರೆ;
ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಒಟ್ಟು ಹತ್ತು ಸಹೋದರರು ಐಪಿಎಲ್ ಆಡಿದ್ದಾರೆ. ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ (ಭಾರತ), ಶಾನ್ ಮಾರ್ಷ್, ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ), ಮೈಕಲ್ ಹಸ್ಸಿ, ಡೇವಿಡ್ ಹಸ್ಸಿ (ಆಸ್ಟ್ರೇಲಿಯಾ), ಅಲ್ಬಿ ಮೊರ್ಕೆಲ್, ಮೊರ್ನೆ ಮೊರ್ಕೆಲ್ (ದಕ್ಷಿಣ ಆಫ್ರಿಕಾ), ಬ್ರೆಂಡನ್ ಮೆಕಲಮ್, ನಾಥನ್ ಮೆಕಲಮ್ (ನ್ಯೂಜಿಲ್ಯಾಂಡ್), ಡ್ವೇನ್ ಬ್ರಾವೋ, ಡ್ಯಾರೆನ್ ಬ್ರಾವೋ (ವೆಸ್ಟ್ ಇಂಡೀಸ್), ಸಿದ್ದಾರ್ಥ್ ಕೌಲ್, ಉದಯ್ ಕೌಲ್ (ಭಾರತ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ (ಭಾರತ), ಸ್ಯಾಮ್ ಕರನ್, ಟಾಮ್ ಕರನ್ (ಇಂಗ್ಲೆಂಡ್), ಮಾರ್ಕೊ ಜಾನ್ಸೆನ್, ಡುವಾನ್ ಜಾನ್ಸೆನ್ (ದಕ್ಷಿಣ ಆಫ್ರಿಕಾ).