ಕರಾಚಿ: ಐಪಿಎಲ್‌ನ(IPL 2023) ಅತ್ಯಂತ ನತದೃಷ್ಟ ತಂಡಗಳಲ್ಲಿ ಒಂದಾದ ಆರ್‌ಸಿಬಿ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ವಾಸಿಂ ಅಕ್ರಮ್(Wasim Akram) ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಒಂದೊಮ್ಮೆ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಆರ್‌ಸಿಬಿ ತಂಡದ ನಾಯಕನಾಗಿರುತ್ತಿದ್ದರೆ, ತಂಡ ಕಪ್ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.
ಐಪಿಎಲ್ ಟೂರ್ನಿಯ ವಿಚಾರವಾಗಿ ಮಾತನಾಡಿದ ವಾಸಿಂ ಅಕ್ರಮ್ ಅವರು ಧೋನಿ ಆರ್‌ಸಿಬಿ ತಂಡದ ನಾಯಕರಾಗಿದ್ದರೆ, ಆರ್‌ಸಿಬಿ ಇಷ್ಟರಲ್ಲಿ ಮೂರು ಸಲ ಚಾಂಪಿಯನ್ ಪಟ್ಟ ಅಲಂಕರಿಸುತ್ತಿತ್ತು ಎಂದು ಕ್ರಿಕ್ ಬಝ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ಇದುವರೆಗಿನ ಐಪಿಎಲ್‌ನ ಎಲ್ಲ ಆವೃತ್ತಿಯಲ್ಲೂ ಆರ್‌ಸಿಬಿ ಬಲಿಷ್ಠ ಆಟಗಾರರನ್ನು ಒಳಗೊಂಡಿತ್ತು. ಆದರೆ ಕಪ್ ಗೆಲ್ಲುವಲ್ಲಿ ಮಾತ್ರ ವಿಫಲವಾಗಿದ್ದು ದೌರ್ಭಾಗ್ಯವೇ ಸರಿ. ತಂಡ ಮೂರು ಬಾರಿ ಫೈನಲ್ ಪ್ರವೇಶ ಪಡೆದರೂ ಇಲ್ಲಿ ಎಡವಿತ್ತು. ಒಂದೊಮ್ಮೆ ಈ ಸಂದರ್ಭದಲ್ಲಿ ಧೋನಿ ಅವರು ಆರ್‌ಸಿಬಿ ತಂಡದ ನಾಯಕನಾಗಿರುತ್ತಿದ್ದರೆ ತಂಡ ಕಪ್ ಗೆಲ್ಲುತ್ತಿತ್ತು” ಎಂದರು.
ಇದನ್ನೂ ಓದಿ IPL 2023: ತವರಿಗೆ ಮರಳಿದ ಮಾರ್ಕ್ ವುಡ್; ಲಕ್ನೋ ತಂಡಕ್ಕೆ ಹಿನ್ನಡೆ
ಧೋನಿ ಅವರು ಈ ಬಾರಿಯ ಐಪಿಎಲ್ ಬಳಿಕ ವಿದಾಯ ಹೇಳುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ನನ್ನ ಪ್ರಕಾರ ಧೋನಿಗೆ ಇನ್ನೂ 2 ಆವೃತ್ತಿಯ ಐಪಿಎಲ್ ಆಡುವ ಸಾಮರ್ಥ್ಯವಿದೆ. ಅವರು ಹೊಸ ಆಟಗಾರರನ್ನು ಬೆಳೆಸುವ ರೀತಿ ಅದ್ಭುತ ಎಂದು ಅಕ್ರಮ್ ಅಭಿಪ್ರಾಯಪಟ್ಟರು.
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಆಡಿದ 11 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 13 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಆರ್‌ಸಿಬಿ 10ರಲ್ಲಿ 5 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ.