ಅಹಮದಾಬಾದ್: 16ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ 5ನೇ ಬಾರಿ ಕಪ್ ಗೆದ್ದ ಸಾಧನೆ ಮಾಡಿತು. ಚೆನ್ನೈ ತಂಡ ಕಪ್ ಗೆಲ್ಲುತ್ತಿದ್ದಂತೆ ಗೌತಮ್ ಗಂಭೀರ್ ಅವರು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ ಎಂಬ ನಾಣ್ಣುಡಿಯಂತೆ ಶುಭಕೋರುವ ಮೂಲಕ ಆರ್ಸಿಬಿ ಮತ್ತು ವಿರಾಟ್ ಕೊಹ್ಲಿಯ ಕಾಲೆಳೆದಿದ್ದಾರೆ.
ಮಳೆಯಿಂದಾಗಿ ಭಾನುವಾರದಿಂದ ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದ ಐಪಿಎಲ್ 16ನೇ ಆವೃತ್ತಿಯ ಮಳೆ ಪೀಡಿತ ಫೈನಲ್ನಲ್ಲಿ ಚೆನ್ನೈ ತಂಡ ಹಾಲಿ ಚಾಂಪಿಯನ್ ಆಗಿದ್ದ ಗುಜರಾತ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದನ್ವಯ 5 ವಿಕೆಟ್ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಸತತ ಎರಡನೇ ಟ್ರೋಫಿಯ ಕನಸು ಕಂಡಿದ್ದ ಹಾರ್ದಿಕ್ ಪಡೆ ನಿರಾಸೆ ಅನುಭವಿಸಿತು. ಕಡೇಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಅವರು ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು.
ಪಂದ್ಯದ ಮುಕ್ತಾಯದ ಬಳಿಕ ಟ್ವೀಟ್ ಮಾಡಿದ ಗಂಭೀರ್ ಅವರು,”ಒಂದು ಬಾರಿ ಕಪ್ ಗೆಲ್ಲುವುದೇ ಕಷ್ಟ, ಆದರೆ ಐದು ಬಾರಿ ಕಪ್ ಗೆಲ್ಲುವುದೆಂದರೆ ನಿಜಕ್ಕೂ ಅದ್ಭುತ, ಈ ಸಾಮರ್ಥ್ಯಕ್ಕೆ ಮೆಚ್ಚಲೇ ಬೇಕು” ಎಂದು ಬರೆದುಕೊಂಡಿದ್ದಾರೆ. ಇದು ಗಂಭೀರ್ ಅವರು ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ತಂಡಕ್ಕೆ ಪರೋಕ್ಷವಾಗಿ ನೀಡಿದ ಟಾಂಗ್ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ IPL 2023: ಚೆನ್ನೈ ತಂಡಕ್ಕೆ ಶುಭಾಶಯಗಳ ಮಹಾಪೂರ, ಅಭಿನಂದನೆಗಳ ಸಾಲೇ ರೋಮಾಂಚಕ!
Congratulations CSK! Winning 1 title is difficult, winning 5 is unbelievable! #IPL2023
— Gautam Gambhir (@GautamGambhir) May 30, 2023
ಈ ಬಾರಿಯ ಐಪಿಎಲ್ನಲ್ಲಿ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಮೈದಾನದಲ್ಲೇ ಕೆಲವು ಘರ್ಷಣೆಗಳು ನಡೆದಿತ್ತು. ಬಳಿಕ ಒಬ್ಬರಿಗೊಬ್ಬರು ಟ್ವಿಟರ್ ಮೂಲಕ ತಮ್ಮ ಆಕ್ರೋಶವನ್ನು ಪರೋಕ್ಷವಾಗಿ ವ್ಯಕ್ತಪಡಿಸುತ್ತಿದ್ದರು. ಇದರ ಜತೆಗೆ ಆರ್ಸಿಬಿ ಮತ್ತು ಕೊಹ್ಲಿ ಅವರ ಅಭಿಮಾನಿಗಳು ಗಂಭಿರ್ಗೆ ಹೋದಲ್ಲಿ ಬಂದಲ್ಲಿ ಕೊಹ್ಲಿ ಹೆಸರು ಕೂಗುತ್ತಾ ಕೀಟಲೆ ಮಾಡುತ್ತಿದ್ದರು. ಇದೆಲ್ಲದಕ್ಕೂ ಗಂಭೀರ್ ಚೆನ್ನೈ ಗೆಲುವಿಗೆ ಶುಭಕೋರುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಒಂದು ಕಪ್ ಗೆಲ್ಲಲು ಯೋಗ್ಯತೆ ಇಲ್ಲದ ತಂಡ ಎನ್ನುವ ಅರ್ಥದಲ್ಲಿ ತಿರುಗೇಟು ನೀಡಿದ್ದಾರೆ. ಸದ್ಯ ಗಂಭಿರ್ ಅವರ ಟ್ವೀಟ್ ವೈರಲ್ ಆಗಿದೆ.