ಮುಂಬಯಿ: ಆರ್‌ಸಿಬಿ ವಿರುದ್ಧ ಮಂಗಳವಾರ ನಡೆದ ಐಪಿಎಲ್(IPL 2023) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರು ವಿಶೇಷ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ನೋಡಿದಾಗ ಗಲ್ಲಿ ಕ್ರಿಕೆಟ್ನ ನೆನಪು ಬರುತ್ತದೆ ಎಂದು ಸುನಿಲ್ ಗವಾಸ್ಕರ್ ಪಂದ್ಯ ಮುಕ್ತಾಯದ ಬಳಿಕ ಹೇಳಿದ್ದಾರೆ. “ಆರಂಭಿಕ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ವೈಫಲ್ಯ ಕಂಡಾಗ ನಾನು ಅವರ ಬಗ್ಗೆ ಹಲವು ಟೀಕೆಗಳನ್ನು ವ್ಯಕ್ತಪಡಿಸಿದ್ದೆ. ಆದರೆ ಇದೀಗ ಅವರು ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಇದು ಸಂತಸದ ವಿಚಾರ. ಅವರು ಆರ್‌ಸಿಬಿ ವಿರುದ್ಧ ತೋರಿದ ಬ್ಯಾಟಿಂಗ್ ಪ್ರದರ್ಶನವನ್ನು ಕಂಡು ನಾವು ಬಾಲ್ಯದಲ್ಲಿ ಗಲ್ಲಿಯಲ್ಲಿ ಆಡಿದ ಕ್ರಿಕೆಟ್ ಪಂದ್ಯ ನೆನೆಪು ಬಂತು. ಏಕೆಂದರೆ ಅವರು ಯಾವುದೇ ಭೀತಿಯಿಲ್ಲದೆ ಬಹಳ ಸಲೀಸಾಗಿ ಈ ಪಂದ್ಯದಲ್ಲಿ ಬ್ಯಾಟ್ ಬೀಸಿದರು” ಎಂದು ಗವಾಸ್ಕರ್ ಹೇಳಿದರು.
ಇದನ್ನೂ ಓದಿ IPL 2023 : ಗೆಲುವಿನ ಹಳಿಗೆ ಮರಳುವುದೇ ರಾಜಸ್ಥಾನ್ ರಾಯಲ್ಸ್
ಮೂರು ಸಾವಿರ ರನ್ ಪೂರೈಸಿದ ಸೂರ್ಯ
ಈ ಪಂದ್ಯದಲ್ಲಿ ಚೇಸಿಂಗ್ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಟಿ20 ಕ್ರಿಕೆಟ್ನ ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಆರ್‌ಸಿಬಿ ಬೌಲರ್ಗಳ ಮೇಲೆರಗಿ ವಾಂಖೇಡೆ ಅಂಗಳದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ನಟರಾಜ ಭಂಗಿಯ ಶೈಲಿಯಲ್ಲಿ ಬ್ಯಾಟ್ ಬೀಸಿದ ಅವರು ಕೇವಲ 35 ಎಸೆತಗಳಲ್ಲಿ ಬರೋಬ್ಬರಿ 6 ಸಿಕ್ಸರ್ ಮತ್ತು 7 ಬೌಂಡರಿ ನೆರವಿನಿಂದ 83 ರನ್ ಬಾರಿಸಿದರು. ಈ ಬ್ಯಾಟಿಂಗ್ ಅಬ್ಬರದ ಮಧ್ಯೆ ಸೂರ್ಯಕುಮಾರ್ ಯಾದವ್ ಅವರು ಐಪಿಎಲ್ನಲ್ಲಿ ಮೂರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
ಪಂದ್ಯ ಸೋತ ಆರ್‌ಸಿಬಿ
ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್‌ಸಿಬಿ 6 ವಿಕೆಟಿಗೆ 199 ರನ್ ಪೇರಿಸಿ ಸವಾಲೊಡ್ಡಿತು, ಜವಾಬಿತ್ತ ಮುಂಬೈ ಇಂಡಿಯನ್ಸ್ ತಂಡವು 16.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟದಲ್ಲಿ ಜಯ ಸಾಧಿಸಿತಲ್ಲದೇ ಮೊದಲ ಮುಖಾಮುಖೀಯಲ್ಲಿ 8 ವಿಕೆಟ್‌ಗಳ ಸೋಲಿಗೆ ಸೇಡು ತೀರಿಸಿಕೊಂಡಿತು.