ಮುಂಬಯಿ: ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಶುಭಮನ್ ಗಿಲ್ ಅವರ ಪ್ರದರ್ಶನಕ್ಕೆ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರ ಕ್ರಿಕೆಟ್ ಬಗೆಗಿನ ಭವಿಷ್ಯವನ್ನು ನುಡಿದಿದ್ದಾರೆ. ಗಿಲ್ ಅವರು ಭಾರತ ಕಂಡ ದಿಗ್ಗಜ ಕ್ರಿಕೆಟ್ ಆಟಗಾರರ ಸಾಲಿಗೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದರುವ ಕಪಿಲ್, “ಸುನಿಲ್ ಗವಾಸ್ಕರ್ ಬಳಿಕ ಸಚಿನ್ ತೆಂಡೂಲ್ಕರ್ ಬಂದರು, ಅದಾದ ಬಳಿಕ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ವಿರಾಟ್ ಕೊಹ್ಲಿ ಹೀಗೆ ಹಲವು ಆಟಗಾರರು ಕಾಣಿಸಿಕೊಂಡರು. ಇದೀಗ ಶುಭಮನ್ ಗಿಲ್ ಅವರ ಉದಯವಾಗಿದೆ. ಈ ಯುವ ಆಟಗಾರ ಇನ್ನು ಕೆಲ ಕಾಲ ಭಾರತ ಕ್ರಿಕೆಟ್ ತಂಡವನ್ನು ಆಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವಕ ಕ್ರಿಕೆಟ್ ಕೌಶಲವನ್ನು ನೋಡುವಾಗ ಇದು ಅರಿವಿಗೆ ಬರುತ್ತದೆ” ಎಂದರು.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾಕ್ಕೆ ಬಂದಾಗಲೂ ಇದೇ ರೀತಿಯ ಬ್ಯಾಟಿಂಗ್ ಫಾರ್ಮ್ನಲ್ಲಿದ್ದರು. ಮುಂದಿನದ್ದು ಇತಿಹಾಸ. ಇದೀಗ ಕೊಹ್ಲಿಯಂತೆಯೇ ಗಿಲ್ ಕೂಡ ಹಲವು ದಾಖಲೆಗಳನ್ನು ಬರೆಯುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ವಿಶೇಷ ಸ್ಥಾನ ಪಡೆಯುವ ವಿಶ್ವಾಸ ನನ್ನಲ್ಲಿದೆ ಎಂದು ಕಪಿಲ್ ಅಭಿಪ್ರಾಯಪಟ್ಟರು. ಇದರ ಜತೆಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಆಟದ ಗಮನವನ್ನು ಯಾವತ್ತು ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ IPL 2023: ಕೊಹ್ಲಿ ದಾಖಲೆ ಮುರಿಯುವರೇ ಶುಭಮನ್ ಗಿಲ್?
ಶುಭಮನ್ ಗಿಲ್ ಅವರು ಈ ಬಾರಿಯ ಐಪಿಎಲ್ನಲ್ಲಿ ಮೂರು ಶತಕ ಬಾರಿಸಿ ಮಿಂಚಿದ್ದಾರೆ. ಸದ್ಯ ಇಂದು ನಡೆಯುವ ಚೆನ್ನೈ ವಿರುದ್ಧದ ಫೈನಲ್ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್ ಮೇಲೆ ಹಲವರು ಬೆಟ್ಟದಂತ ನಿರೀಕ್ಷೆ ಇರಿಸಿದ್ದಾರೆ. ಈಗಾಗಲೇ ಭಾರತ ತಂಡದ ಪರ ಏಕದಿನದಲ್ಲಿ ದ್ವಿಶತಕ ಬಾರಿಸಿದ ಸಾಧನೆಯನ್ನೂ ಮಾಡಿದ್ದಾರೆ. ಸದ್ಯಕ್ಕಂತು ಅವರನ್ನು ಭಾರತದ ನವ ಕ್ರಿಕೆಟ್ ತಾರೆ ಎಂದೇ ಬಣ್ಣಿಸಲಾಗಿದೆ.