ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ರನ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ 8 ಅಂಕ ಸಂಪಾದಿಸಿ ಸದ್ಯ 5ನೇ ಸ್ಥಾನಕ್ಕೇರಿದೆ. ಇದೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಅವರು ನೂತನ ಮೈಲುಗಲ್ಲೊಂದನ್ನು ತಲುಪಿದರು.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಐಪಿಎಲ್ನ(IPL 2023) ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಪರ ಮ್ಯಾಕ್ಸ್ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನ ಅಷ್ಟ ದಿಕ್ಕುಗಳಿಗೂ ಸಿಕ್ಸರ್, ಬೌಂಡರಿ ಬಾರಿಸಿ ತವರಿನ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಇದೇ ವೇಳೆ ಅವರು ಆರ್‌ಸಿಬಿ ಪರ ಒಂದು ಸಾವಿರ ರನ್ ಪೂರ್ತಿಗೊಳಿಸಿದರು. ಈ ಮೂಲಕ ಆರ್‌ಸಿಬಿ ಪರ ಈ ಸಾಧನೆ ಮಾಡಿದ 5ನೇ ಬ್ಯಾಟರ್ ಎಂಬ ಕೀರ್ತಿಗೆ ಪಾತ್ರರಾದರು. ಈ ಸಾಧನೆ ಮಾಡಿದ ಉಳಿದ ಆಟಗಾರರೆಂದರೆ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕ್ರಿಸ್ ಗೇಲ್, ಜ್ಯಾಕ್ ಕ್ಯಾಲಿಸ್.
ಇದನ್ನೂ ಓದಿ IPL 2023: ಆರ್‌ಸಿಬಿ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಮೋದಿ ಹವಾ; ಇಲ್ಲಿದೆ ವಿಡಿಯೊ
ಮ್ಯಾಕ್ಸ್ವೆಲ್ ಕೇವಲ 44 ಎಸೆತದಲ್ಲಿ 77 ರನ್ ಸಿಡಿಸಿದರು. ಈ ಇನಿಂಗ್ಸ್ ವೇಳೆ 4 ಸಿಕ್ಸರ್ ಮತ್ತು 6 8 ಬೌಂಡರಿ ದಾಖಲಾಯಿತು. ಡು ಪ್ಲೆಸಿಸ್ ಜತೆಗೂಡಿ ಮೂರನೇ ವಿಕೆಟ್ಗೆ 127 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಅವರ ಈ ಬ್ಯಾಟಿಂಗ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು.
ಏಪ್ರಿಲ್ 23ಕ್ಕೆ ಶೂನ್ಯ ಸುತ್ತಿದ ವಿರಾಟ್ ಕೊಹ್ಲಿ
ಐಪಿಎಲ್ ಟೂರ್ನಿಯಲ್ಲಿ ಏಪ್ರಿಲ್ 23 ರಂದು ಆಡಿದ ಪ್ರತಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಕೌಟ್ ಆಗಿದ ಸಂಕಟಕ್ಕೆ ಸಿಲಿಕಿದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಕೊಹ್ಲಿ ಗೋಲ್ಡನ್ ಡಕ್ ಆಗುವ ಮೂಲಕ ಈ ಸಂಪ್ರದಾಯವನ್ನು ಮತ್ತೆ ಮುಂದುವರಿಸಿದರು.