ಅಹಮದಾಬಾದ್: ಗೂಗಲ್ ಕಂಪನಿಯ ಭಾರತ ಮೂಲದ ಸಿಇಒ ಸುಂದರ್ ಪಿಚೈ ಅವರು 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅತ್ಯಂತ ರೋಚಕವಾಗಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಕಡೇಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಅವರು ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಟ್ರೋಫಿ ಗೆಲ್ಲುವ ಮೂಲಕ ಚೆನ್ನೈ ತಂಡ ಮುಂಬೈ ದಾಖಲೆಯನ್ನು ಸರಿಗಟ್ಟಿತು. ರೋಹಿತ್ ಪಡೆಯೂ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಮಳೆಯಿಂದಾಗಿ ಭಾನುವಾರದಿಂದ ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದ ಐಪಿಎಲ್ 16ನೇ ಆವೃತ್ತಿಯ ಮಳೆ ಪೀಡಿತ ಫೈನಲ್ನಲ್ಲಿ ಚೆನ್ನೈ ತಂಡ ಹಾಲಿ ಚಾಂಪಿಯನ್ ಆಗಿದ್ದ ಗುಜರಾತ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದನ್ವಯ 5 ವಿಕೆಟ್ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಸತತ ಎರಡನೇ ಟ್ರೋಫಿಯ ಕನಸು ಕಂಡಿದ್ದ ಹಾರ್ದಿಕ್ ಪಡೆ ನಿರಾಸೆ ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ತಂಡ ಸಾಯಿ ಸುದರ್ಶನ್ ಅವರ ಪ್ರಚಂಡ ಬ್ಯಾಟಿಂಗ್ ನಡರವಿನಿಂದ 4 ವಿಕೆಟ್ಗೆ 214 ರನ್ ರಾಶಿ ಹಾಕಿತು. ಗುರಿ ಬೆನ್ನಟ್ಟಿದ ಚೆನ್ನೈ ಮೂರು ಎಸೆತಗಳಲ್ಲಿ 4 ರನ್ ಗಳಿಸಿದ ವೇಳೆ ಜೋರಾಗಿ ಮಳೆ ಸುರಿಯಿತು. ರಾತ್ರಿ 12.10 ರಿಂದ ಆರಂಭಗೊಂಡ ಪಂದ್ಯದಲ್ಲಿ ಡಕ್ವರ್ತ್ ನಿಯಮದ ಪ್ರಕಾರ ಪಂದ್ಯವನ್ನು 15 ಓವರ್ಗೆ ಸೀಮಿತಗೊಳಿಸಲಾಯಿತು. ಧೋನಿ ಪಡೆಗೆ 171 ರನ್ಗಳ ಗುರಿ ನಿಗದಿಪಡಿಸಲಾಯಿತು. ಇದನ್ನು ಅತ್ಯಂತ ಸಾಹಸಮಯ ರೀತಿಯಲ್ಲಿ ಬೆನ್ನಟ್ಟಿ 5 ವಿಕೆಟ್ಗೆ 171 ರನ್ ಬಾರಿಸಿ ಗೆಲುವು ದಾಖಲಿಸಿತು. ಜಡೇಜಾ ಪಂದ್ಯದ ಹೀರೊ ಆಗಿ ಮೆರೆದಾಡಿದರು.
ಇದನ್ನೂ ಓದಿ IPL 2023: ʼʼರಿಟೈರ್ ಆಗೋಕೆ ಸೂಕ್ತ ಸಮಯ, ಆದ್ರೆ…ʼʼ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಧೋನಿ ಹೇಳಿದ್ದೇನು?
Some final that one! Great #TATAIPL as always and congrats to CSK! and GT will be back stronger next year! https://t.co/R75CJeTfgx
— Sundar Pichai (@sundarpichai) May 29, 2023
ಚೆನ್ನೈ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ಕೂಡಲೇ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿದ್ದಾರೆ. ಜತೆಗೆ ರನ್ನರ್ ಅಪ್ ಪಡೆದ ಗುಜರಾತ್ ತಂಡದ ಪ್ರದರ್ಶನಕ್ಕೂ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಬಾರಿ ಬಲಿಷ್ಠವಾಗಿ ಕಮ್ಬ್ಯಾಕ್ ಎಂದು ಹಾರೈಸಿದ್ದಾರೆ.