Site icon Vistara News

IPL 2023: ಅಜೇಯ ಓಟ ಮುಂದುವರಿಸಿದ ಗುಜರಾತ್​; ಡೆಲ್ಲಿ ವಿರುದ್ಧ 6 ವಿಕೆಟ್​ ಜಯ

IPL 2023: Gujarat continue unbeaten run; 6 wicket win against Delhi

IPL 2023: Gujarat continue unbeaten run; 6 wicket win against Delhi

ನವದೆಹಲಿ: ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ (Gujarat Titans)ತಂಡದ ಅಜೇಯ ಗೆಲುವಿನ ಓಟ ಮುಂದುವರಿದಿದೆ. ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್​ಗಳ ಗೆಲುವು ದಾಖಲಿಸಿ ತಾನಾಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ ಸದ್ಯ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆಲುವು ಸಾಧಿಸಿತ್ತು.

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ 16ನೇ ಆವೃತ್ತಿಯ ಐಪಿಎಲ್​ನ 7ನೇ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 162 ರನ್​ ಗಳಿಸಿತು. ಜವಾಬಿತ್ತ ಗುಜರಾತ್​ ಟೈಟಾನ್ಸ್​ ಕೂಡ ಆರಂಭಿಕ ಆಘಾತ ಕಂಡಿತು. ಆದರೆ ಸಾಯಿ ಸುದರ್ಶನ್​( ಅಜೇಯ 62)​ ಮತ್ತು ವಿಜಯ್​ ಶಂಕರ್(​29) ಅವರ ಜವಾಬ್ದಾರಿಯುತ ಆಟದ ನೆರವಿನಿಂದ 18.1 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 163 ರನ್​ ಗಳಿಸಿ ಗೆಲುವು ದಾಖಲಿಸಿತು. ಡೆಲ್ಲಿಗೆ ಎದುರಾದ ಎರಡನೇ ಸೋಲು ಇದಾಗಿದೆ.

ಗುರಿ ಬೆನ್ನಟ್ಟಿದ ಗುಜರಾತ್​ಗೆ ಈ ಆವೃತ್ತಿಯ ಐಪಿಎಲ್​ನಲ್ಲಿ ಮೊದಲ ಬಾರಿ ಆಡಲಿಳಿದ ದಕ್ಷಿಣ ಆಫ್ರಿಕಾದ ಬೌಲರ್​ ಅನ್ರಿಚ್ ನೋರ್ಜೆ ಆರಂಭಿಕಾರಾದ ಶುಭಮನ್​ ಗಿಲ್​(14) ಮತ್ತು ವೃದ್ಧಿಮಾನ್​ ಸಾಹಾ(14) ಅವರ ವಿಕೆಟ್​ ಕಿತ್ತು ಅವಳಿ ಆಘಾತವಿಕ್ಕಿದರು.​ ಈ ವಿಕೆಟ್​ ಪತನದ ಬೆನ್ನಲ್ಲೇ ನಾಯಕ ಹಾರ್ದಿಕ್​ ಪಾಂಡ್ಯ(5) ಕೂಡ ವಿಕೆಟ್​ ಕೈ ಚೆಲ್ಲಿದರು. 54 ರನ್​ಗೆ ಮೂರು ವಿಕೆಟ್​ ಕಳೆದುಕೊಂಡ ಗುಜರಾತ್​ ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ತಂಡಕ್ಕೆ ಸಾಯಿ ಸುದರ್ಶನ್ ಮತ್ತು ವಿಜಯ್​ ಶಂಕರ್ ಆಸರೆಯಾದರು. ಡೆಲ್ಲಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಉಭಯ ಆಟಗಾರರು ಓವರ್​ಗೆ ಒಂದು ಬೌಂಡರಿ, ಸಿಕ್ಸರ್ ಬಾರಿಸುತ್ತ ಸಾಗಿದರು. ಈ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸ ತೊಡಗಿದರು. ಇದೇ ವೇಳೆ ಸಾಯಿ ಸುದರ್ಶನ್ ​ಅರ್ಧಶತಕ ಪೂರ್ತಿಗೊಳಿಸಿದರು. ಇನ್ನೊಂದು ಬದಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ವಿಜಯ್​ ಶಂಕರ್ ಅವರನ್ನು ಮಿಚೆಲ್​ ಮಾರ್ಷ್​ ಎಲ್​ಬಿಡಬ್ಲ್ಯು ಬಲೆಗೆ ಬೀಳಿಸಿ ವಿಕೆಟ್​ ಪಡೆದರು. ವಿಜಯ್​ ಶಂಕರ್​ 23 ಎಸೆತಗಳಿಂದ 29 ರನ್​ ಬಾರಿಸಿದರು. ಅಂತಿಮವಾಗಿ ಡೇವಿಡ್​ ಮಿಲ್ಲರ್​ ಬಿರುಸಿನ ಬ್ಯಾಟಿಂಗ್​ ನಡೆಸಿ ಗಮನ ಸೆಳೆದರು. 16 ಎಸೆತ ಎದುರಿಸಿ ತಲಾ ಎರಡು ಬೌಂಡರಿ ಮತ್ತು ಸಿಕ್ಸರ್​ ನೆರವಿನಿಂದ ಅಜೇಯ 31 ರನ್​ ಸಿಡಿಸಿದರು. ಸಾಯಿ ಸುದರ್ಶನ್ 48 ಎಸೆತಗಳಿಂದ ಅಜೇಯ 62 ರನ್​ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಆರಂಭಿಕ ಕುಸಿತ ಕಂಡ ಡೆಲ್ಲಿ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಆರಂಭದಲ್ಲಿ ನಾಟಕೀಯ ಕುಸಿತ ಕಂಡಿತು. ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡ ಗುಜರಾತ್​ ತಂಡದ ನಾಯಕನ ಆಯ್ಕೆಯನ್ನು ಮೊಹಮ್ಮದ್​ ಶಮಿ, ಅಲ್ಜಾರಿ ಜೋಸೆಫ್​ ಸಮರ್ಥಿಸಿಕೊಂಡರು. ನಾಯಕ ಡೇವಿಡ್​ ವಾರ್ನರ್(37), ಪೃಥ್ವಿ ಶಾ(7), ಮಿಚೆಲ್​ ಮಾರ್ಷ್(4)​ ವಿಕೆಟ್​ ಕಿತ್ತು ತಂಡಕ್ಕೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಈ ಆಟಗಾರರ ವಿಕೆಟ್​ ಪತನದ ಬಳಿಕ ಡೆಲ್ಲಿ ತಂಡದ ಕುಸಿತ ಆರಂಭಗೊಂಡಿತು. ಇನ್ನೇನು 100 ರನ್​ ಗಳಿಸುವುದು ಕಷ್ಟ ಎಂದು ಊಹಿಸಿದಾಗ ಐಪಿಎಲ್​ ಪದಾರ್ಪಣೆ ಮಾಡಿದ ಅಭಿಷೇಕ್​ ಪೋರೆಲ್​ ಮತ್ತು ಸರ್ಫರಾಜ್​ ಖಾನ್​ ಹೋರಾಟವೊಂದನ್ನು ನಡೆಸಿದ ಕಾರಣ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಇದನ್ನೂ ಓದಿ IPL 2023: ಅಪಘಾತದ ಬಳಿಕ ಮೊದಲ ಬಾರಿಗೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ರಿಷಭ್​ ಪಂತ್​

ಸರ್ಫರಾಜ್​ 30 ರನ್​ ಗಳಿಸಿದರೆ, ಅಭಿಷೇಕ್​ 20 ರನ್​ ಬಾರಿಸಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ತಂಡದ ಉಪನಾಯಕ ಅಕ್ಷರ್​ ಪಟೇಲ್​​ 21 ಎಸೆತದಿಂದ 36 ರನ್​ ಬಾರಿಸಿದರು. ಈ ಪರಿಣಾಮ ತಂಡ 150ರ ಗಟಿ ದಾಟಿತು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಮೂರು ಸಿಕ್ಸರ್​ ಮತ್ತು 2 ಬೌಂಡರಿ ಸಿಡಿಯಿತು. ಗುಜರಾತ್​ ಪರ ಬೌಲಿಂಗ್​ನಲ್ಲಿ ಅಲ್ಜಾರಿ ಜೋಸೆಫ್ 2, ರಶೀದ್​ ಖಾನ್ ಮತ್ತು ಮೊಹಮ್ಮದ್​ ಶಮಿ ತಲಾ​ 3 ವಿಕೆಟ್ ಕಿತ್ತು ಮಿಂಚಿದರು.​​

ಮತ್ತೆ ವೈಫಲ್ಯ ಕಂಡ ಪೃಥ್ವಿ, ಮಾರ್ಷ್​

ಲಕ್ನೋ ಸೂಪರ್​ಜೈಂಟ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಮಿಚೆಲ್​ ಮಾರ್ಷ್​ ಅವರು ಈ ಪಂದ್ಯದಲ್ಲಿ ಸಿಡಿದು ನಿಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಈ ಪಂದ್ಯದಲ್ಲಿಯೂ ವೈಫಲ್ಯ ಕಂಡರು. 4 ರನ್​ ಗಳಿಸಿದ್ದ ವೇಳೆ ಜೀವದಾನ ಪಡೆದರೂ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು. ಮುಂದಿನ ಎಸೆತದಲ್ಲಿಯೇ ಬೌಲ್ಟ್​ ಆಗಿ ಪೆವಿಲಿಯನ್​ ಸೇರಿದರು. ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿದ್ದ ಮುಂಬೈಯ ಪೃಥ್ವಿ ಶಾ ಅವರ ಬ್ಯಾಟ್​ ಈ ಬಾರಿ ಸದ್ದು ಮಾಡುವಂತೆ ಕಾಣುತ್ತಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿಯೂ ಅವರದ್ದು ಸಿಂಗಲ್​ ಡಿಜಿಟ್​. ಉಭಯ ಆಟಗಾರರ ಬ್ಯಾಟಿಂಗ್​ ವೈಫಲ್ಯದಿಂದಾಗಿ ತಂಡದ ದೊಡ್ಡ ಮೊತ್ತದ ಯೋಜನೆಗೆ ಹಿನ್ನಡೆಯಾಯಿತು.

​ಪಂದ್ಯ ವೀಕ್ಷಿಸಿದ ಪಂತ್​

ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್​ ಪಂತ್​ ಈ ಪಂದ್ಯಕ್ಕೆ ಆಗಮಿಸಿ ತನ್ನ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್​ಗೆ ಬೆಂಬಲಿಸಿದರು. ಪಂತ್​ ಅವರು ಸ್ಟೇಡಿಯಂಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರು ಪಂತ್​ ಅವರ ಹೆಸರು ಕೂಗಿ ಯುವ ಆಟಗಾರನಿಗೆ ಹಾರೈಸಿದರು. ಡಗೌಟ್​ನಲ್ಲಿ ಕುಳಿತ್ತಿದ್ದ ಸೌರವ್​ ಗಂಗೂಲಿ ಕೂಡ ಪಂತ್​ ಅವರನ್ನು ಕಂಡು ಖುಷಿ ಪಟ್ಟರು.

ಸಂಕ್ಷಿಪ್ತ ಸ್ಕೋರ್​: ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 162 (ಡೇವಿಡ್​ ವಾರ್ನರ್​ 37, ಅಕ್ಷರ್​ ಪಟೇಲ್​ 36, ಸರ್ಫರಾಜ್​ ಖಾನ್​ 30, ಅಭಿಷೇಕ್​ ಪೋರೆಲ್​ 20, ಮೊಹಮ್ಮದ್​ ಶಮಿ 41ಕ್ಕೆ 3, ರಶೀದ್​ ಖಾನ್​ 31ಕ್ಕೆ 3, ಅಲ್ಜಾರಿ ಜೋಸೆಫ್​ 29ಕ್ಕೆ 2).

Exit mobile version