ಮುಂಬಯಿ: ಸೂರ್ಯಕುಮಾರ್ ಯಾದವ್(103*) ಅವರ ಸೊಗಸಾದ ಶತಕ ಮತ್ತು ವಿಷ್ಣು ವಿನೋದ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತ ಪೇರಿಸಿದೆ. ಗುಜರಾತ್ ಪರ ರಶೀದ್ ಖಾನ್ 4 ವಿಕೆಟ್ ಕಿತ್ತು ಮಿಂಚಿದರು.
ಮುಂಬಯಿಯ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ. ಗುಜರಾತ್ ಗೆಲುವಿಗೆ 219 ರನ್ ಬಾರಿಸಬೇಕಿದೆ.
ಮುಂಬೈ ಉತ್ತಮ ಆರಂಭ
ಬ್ಯಾಟಿಂಗ್ ಆಹ್ವಾನ ಪಡೆದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮ ಮತ್ತು ಇಶಾನ್ ಕಿಶನ್ ಸೇರಿಕೊಂಡು ಓವರ್ಗೆ 10 ಸರಾಸರಿಯಲ್ಲಿ ಬ್ಯಾಟ್ ಬೀಸಿದರು. ಉಭಯ ಆಟಗಾರರ ಬ್ಯಾಟಿಂಗ್ ಆರ್ಭಟದ ಮುಂದೆ ಗುಜರಾತ್ ವೇಗಿಗಳು ಹಿಡಿತ ತಪ್ಪಿದರು. ಹಲವು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ನಡೆಸಿ ಟೀಕೆಗೆ ಗುರಿಯಾಗಿದ್ದ ರೋಹಿತ್ ಶರ್ಮ ಅವರು ಈ ಪಂದ್ಯದಲ್ಲಿ 29 ರನ್ ರನ್ ಬಾರಿಸಿ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಮತ್ತು ಇಶಾನ್ ಮೊದಲ ವಿಕೆಟ್ಗೆ 61 ರನ್ ಒಟ್ಟುಗೂಡಿಸಿದರು.
ರೋಹಿತ್ ವಿಕೆಟ್ ಪತನದ ಬಳಿಕ 5 ರನ್ ಅಂತರದಲ್ಲಿ ಇಶಾನ್ ಕಿಶನ್ ವಿಕೆಟ್ ಕೂಡ ಬಿತ್ತು. ಈ ವಿಕೆಟ್ ಕೂಡ ರಶೀದ್ ಪಾಲಾಯಿತು. ಆದರೆ ರಶೀದ್ ಅವರ ವಿಕೆಟ್ ದಾಹ ಇಲ್ಲಿಗೆ ನಿಲ್ಲಲಿಲ್ಲ. ಮುಂದಿನ ಓವರ್ನಲ್ಲಿ ನೆಹಾಲ್ ವಧೇರಾ ಅವರ ವಿಕೆಟ್ ಕೂಡ ಉಡಾಯಿಸಿದರು. ಇಶಾನ್ 31 ರನ್ ಗಳಿಸಿದರೆ, ವಧೇರಾ 15 ರನ್ ಬಾರಿಸಿದರು.
ಸಿಡಿದ ಸೂರ್ಯ-ವಿನೋದ್
ಟಿ20 ಕ್ರಿಕೆಟ್ನ ನಂ.1 ಖ್ಯಾತಿಯ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಈ ಪಂದ್ಯದಲ್ಲಿಯೂ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ನೆರೆದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಕೇರಳ ಮೂಲಕ ವಿಷ್ಣು ವಿನೋದ್ ಕೂಡ ಉತ್ತಮ ಸಾಥ್ ನೀಡಿದರು. ಅವರ ಬ್ಯಾಟಿಂಗ್ ಕೂಡ ಬಿರುಸಿನಿಂದಲೇ ಕೂಡಿತ್ತು. ಉಭಯ ಆಟಗಾರರ ಬ್ಯಾಟಿಂಗ್ ವೇಗದಿಂದ ಮುಂಬೈ ಮತ್ತೆ ಬ್ಯಾಟಿಂಗ್ ಚೇತರಿಕೆ ಕಂಡಿತು.
ಇದನ್ನೂ ಓದಿ IPL 2023: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಪಂಜಾಬ್ ಕಿಂಗ್ಸ್
ನಟರಾಜ ಭಂಗಿಯ ಶೈಲಿಯಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿ ಬಾರಿಸಿ 31 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ವಿಷ್ಣು ವಿನೋದ್ ಅವರು 19 ಎಸೆಗಳಿಂದ 30 ರನ್ ಬಾರಿಸಿದರು. ಈ ಸ್ಫೋಟಕ ಇನಿಂಗ್ಸ್ ವೇಳೆ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಿಡಿಯಿತು. ಅಂತಿಮ ಹಂತದ ವರೆಗೂ ಬ್ಯಾಟಿಂಗ್ ಕಾಯ್ದುಕೊಂಡ ಸೂರ್ಯಕುಮಾರ್ ಗುಜರಾತ್ ಬೌಲರ್ಗಳನ್ನು ಚೆಂಡಾಡಿ ಚೊಚ್ಚಲ ಐಪಿಎಲ್ ಶತಕ ಬಾರಿಸಿ ಮಿಂಚಿದರು. 49 ಎಸೆತ ಎದುರಿಸಿದ ಅವರು ಬರೋಬ್ಬರಿ 11 ಬೌಂಡರಿ ಮತ್ತು 6 ಸಿಕ್ಸರ್ ನರೆವಿನಿಂದ ಅಜೇಯ 103 ರನ್ ಗಳಿಸಿದರು.