ಮೊಹಾಲಿ: ಕೋಲ್ಕತಾ ನೇಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ಗಳ ಗೆಲುವು ದಾಖಲಿಸಿದೆ. ಇದು ಪಾಂಡ್ಯ ಪಡೆಗೆ ಒಲಿದ ಮೂರನೇ ಗೆಲುವಾಗಿದೆ. ಪಂಜಾಬ್ಗೆ ಎದುರಾದ ಸತತ ಎರಡನೇ ಸೋಲು ಇದಾಗಿದೆ.
ಮೊಹಾಲಿಯ ಐ.ಎಸ್.ಬಿಂದ್ರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿತು. ಜವಾಬಿತ್ತ ಗುಜರಾತ್ ಟೈಟನ್ಸ್ 19.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿ ಗೆಲುವು ದಾಖಲಿಸಿತು.
ಸಾಧಾರಣ ಮೊತ್ತವನ್ನು ಬೆನ್ನಟಿದ ಗುಜರಾತ್ಗೆ ಆರಂಭಿಕರಾದ ವೃದ್ಧಿಮಾನ್ ಸಾಹಾ ಮತ್ತು ಶಭಮನ್ ಗಿಲ್ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಕೇವಲ ನಾಲ್ಕು ಓವರ್ಗಳಲ್ಲಿ 40 ರನ್ ಜತೆಯಾಟ ನಡೆಸಿತು. ಈ ವೇಳೆ ಕಗಿಸೊ ರಬಾಡ ಅವರು ಸಾಹಾ ವಿಕೆಟ್ ಕಿತ್ತರು. ಈ ವಿಕೆಟ್ ಪಡೆಯುತ್ತಿದ್ದಂತೆ ರಬಾಡ ಅವರು ಐಪಿಎಲ್ನಲ್ಲಿ ನೂರು ವಿಕೆಟ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಬಳಿಕ ಬಂದ ಸಾಯಿ ಸುದರ್ಶನ್ 19 ರನ್ಗೆ ಔಟಾದರು. ಆದರೆ ಮತ್ತೊಂದು ತುದಿಯಲ್ಲಿ ಜವಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿದ್ದ ಶುಭಮನ್ ಗಿಲ್ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟು 49 ಎಸೆತಗಳಿಂದ ಅವರು 67 ರನ್ ಗಳಿಸಿ ಸ್ಯಾಮ್ ಕರನ್ಗೆ ವಿಕೆಟ್ ಒಪ್ಪಿಸಿದರು.
ಅಂತಿಮ ಓವರ್ನಲ್ಲಿ ಗೆಲುವಿಗೆ 7 ರನ್ ತೆಗೆಯುವ ಸವಾಲಿನಲ್ಲಿ ಡೇವಿಡ್ ಮಿಲ್ಲರ್(17*) ಮತ್ತು ರಾಹುಲ್ ತೆವಾಟಿಯ(5*) ಅಜೇಯ ಆಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 2 ಎಸೆತದ ಮುಂದೆ ನಾಲ್ಕು ರನ್ ಬೇಕಿದ್ದಾಗ ತೆವಾಟಿಯ ಬೌಂಡರಿ ಬಾರಿಸಿ ಗೆಲುವನ್ನು ಸಾರಿದರು. ಪಂಜಾಬ್ ಪರ ಅರ್ಶ್ದೀಪ್ ಸಿಂಗ್, ರಬಾಡ, ಸ್ಯಾಮ್ ಕರನ್ ತಲಾ ಒಂದು ವಿಕೆಟ್ ಪಡೆದರು.
ಪಾಂಡ್ಯ ಮತ್ತೆ ವಿಫಲ
ನಾಯಕ ಪಾಂಡ್ಯ ಅವರ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಕೇವಲ 8 ರನ್ಗೆ ಔಟಾಗುವ ಮೂಲಕ ಮತ್ತೆ ಎರಡಂಕಿ ಮೊತ್ತ ದಾಟುವಲ್ಲಿ ಎಡವಿದರು. ಇದಕ್ಕೂ ಮುನ್ನ ಆಡಿದ ಎರಡು ಪಂದ್ಯದಲ್ಲಿ ಕ್ರಮವಾಗಿ ಅವರು ಗಳಿಸಿದ ಮೊತ್ತ 8,5. ಇದೀಗ ಮೂರು ಪಂದ್ಯಗಳಲ್ಲಿ ಅವರ ಬ್ಯಾಟ್ನಿಂದ ಬಂದ ಒಟ್ಟು ಮೊತ್ತ 21. ಸದ್ಯ ಈ ಪಂದ್ಯದಲ್ಲಿ ಗಿಲ್ ಮತ್ತು ಸಹ ಆಟಗಾರರು ಆಡಿದ ಕಾರಣ ಪಂದ್ಯ ಗೆಲುವು ದಾಖಲಿಸಿತು. ಆದರೆ ಮುಂದಿನ ಪಂದ್ಯದಲ್ಲಿಯೂ ಇವರನ್ನೇ ನಂಬಿ ಕೂತರೆ, ಒಂದೊಮ್ಮೆ ಅವರು ಆಡದೇ ಹೋದರೆ ಪಂದ್ಯ ಸೋಲು ಕಾಣುವುದು ಖಚಿತ. ಹೀಗಾಗಿ ಪಾಂಡ್ಯ ತಕ್ಷಣ ಎಚ್ಚೆತ್ತುಕೊಂಡು ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳುವ ಅನಿವಾರ್ಯತೆ ಇದೆ.
ನೀರಸ ಬ್ಯಾಟಿಂಗ್ ಪ್ರದರ್ಶಿಸಿದ ಪಂಜಾಬ್
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ಗೆ ಆರಂಭದಲ್ಲೇ ಮೊಹಮ್ಮದ್ ಶಮಿ ಶಾಕ್ ನೀಡಿದರು. ತಂಡ ಖಾತೆ ತೆರೆಯುವ ಮೊದಲೇ ಪ್ರಭ್ಶಿಮ್ರಾನ್ ಸಿಂಗ್ ವಿಕೆಟ್ ಬೇಟೆಯಾಡಿ ಗುಜರಾತ್ಗೆ ಮುನ್ನಡೆ ತಂದುಕೊಟ್ಟರು. ಗಾಯದಿಂದಾಗಿ ಜಾನಿ ಬೇರ್ಸ್ಟೋ ಟೂರ್ನಿಯಿಂದ ಹೊರಬಿದ್ದ ಕಾರಣ ತಂಡ ಸೇರ್ಪಡೆಗೊಂಡಿದ್ದ ಮ್ಯಾಥ್ಯೂ ಶಾರ್ಟ್ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಕ್ರೀಸ್ಗೆ ಬಂದ ಆರಂಭದಲ್ಲೇ ಮೊಹಮ್ಮದ್ ಶಮಿ ಓವರ್ನಲ್ಲಿ ಅವರು ಬಡಬಡನೆ 2 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು.
ಬಿರುಸಿನಿಂದಲೇ ಬ್ಯಾಟ್ ಬೀಸುತ್ತಿದ್ದ ಅವರನ್ನು ಕಳೆದ ಪಂದ್ಯದ ಹ್ಯಾಟ್ರಿಕ್ ವಿಕೆಟ್ ವೀರ ರಶೀದ್ ಖಾನ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಅವರ ಬ್ಯಾಟಿಂಗ್ ಅಬ್ಬರಕ್ಕೆ ಬ್ರೇಕ್ ಹಾಕಿದರು. ಒಟ್ಟು 24 ಎಸೆತ ಎದುರಿಸಿದ ಅವರು 36 ರನ್ ಬಾರಿಸಿದರು. 6 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಕಳೆದ ಮೂರು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಗಿದ್ದ ನಾಯಕ ಶಿಖರ್ ಧವನ್ ಅವರು ಈ ಪಂದ್ಯದಲ್ಲಿ ಕೇವಲ 8 ರನ್ಗೆ ಔಟಾದರು.
ಇದನ್ನೂ ಓದಿ IPL 2023: ತಂದೆಯ ಕ್ರಿಕೆಟ್ ಪ್ರದರ್ಶನವನ್ನು ಟಿವಿಯಲ್ಲಿ ಕಂಡು ಖುಷಿಪಟ್ಟ ಅಂಬೆಗಾಲಿನ ಮಗು; ವಿಡಿಯೊ ವೈರಲ್
ಮ್ಯಾಥ್ಯೂ ಶಾರ್ಟ್ ವಿಕೆಟ್ ಪತನದ ಬಳಿಕ ತಂಡದ ಮೊತ್ತವೂ ಕುಂಡಿತವಾಗಿ ಸಾಗಿತು. ಜಿತೇಶ್ 25 ರನ್ ಗಳಿಸಿ ಮೋಹಿತ್ ಶರ್ಮ ಅವರಿಗೆ ವಿಕೆಟ್ ಒಪ್ಪಿಸಿದರು. ಮೋಹಿತ್ ಶರ್ಮ ಅವರು ಮೂರು ವರ್ಷಗಳ ಬಳಿಕ ಐಪಿಎಲ್ ಟೂರ್ನಿಯಲ್ಲಿ ಆಡಲಿಳಿದರು. ಅವರು 2020ರಲ್ಲಿ ಪಂಜಾಬ್ ತಂಡದ ಪರ ಕೊನೆಯ ಬಾರಿ ಐಪಿಎಲ್ ಪಂದ್ಯವನ್ನಾಡಿದ್ದರು. ಮೂರು ವರ್ಷಗಳ ಬಳಿಕ ಆಡಿದರೂ ಉತ್ತಮ ಪ್ರದರ್ಶನ ತೋರಿದರು. 4 ಓವರ್ ಎಸೆದು ಕೇವಲ 18 ರನ್ ನೀಡಿ 2 ವಿಕೆಟ್ ಕಿತ್ತರು. ಆಲ್ರೌಂಡರ್ ಸ್ಯಾಮ್ ಕರನ್ 22, ಭನುಕಾ ರಾಜಪಕ್ಸೆ 20 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಶಾರುಖ್ ಖಾನ್ ಅವರು ಸಿಡಿದು ನಿಂತ ಪರಿಣಾಮ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಅವರು 9 ಎಸೆತಕ್ಕೆ 22 ರನ್ ಗಳಿಸಿ ರನೌಟ್ ಸಂಕಟಕ್ಕೆ ಸಿಲುಕಿದರು.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಸೌಖ್ಯದ ಕಾರಣ ಪಂದ್ಯದಿಂದ ಹೊರಗುಳಿದಿದ್ದ ತಂಡದ ಖಾಯಂ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮತ್ತೆ ನಾಯಕ್ವ ವಹಿಸಿಕೊಂಡರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಶೀದ್ ಖಾನ್ ತಂಡವನ್ನು ಮುನ್ನಡೆಸಿದ್ದರು.