ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್ ತಂಡದ ಉತ್ಕೃಷ್ಟ ಮಟ್ಟದ ಬೌಲಿಂಗ್ ಪ್ರದರ್ಶನದ ಮುಂದೆ ರನ್ ಗಳಿಸಲು ಪರದಾಟ ನಡೆಸಿದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಸಾಧಾರಣ ಮೊತ್ತ ಕಲೆಹಾಕಿದೆ. ಲಕ್ನೋ ತಂಡ ಗೆಲುವಿಗೆ 120 ಎಸೆತಗಳ ಮುಂದೆ ಕೇವಲ 136 ರನ್ ಬಾರಿಸಬೇಕಿದೆ.
ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಸವಾಲೊಡ್ಡಿದೆ.
ಈ ಪಂದ್ಯದಲ್ಲಿ ಗುಜರಾತ್ ತಂಡದ ಆರಂಭ ಅಷ್ಟಾಗಿ ಜೋಶ್ನಿಂದ ಕೂಡಿರಲಿಲ್ಲ. ಶುಭಮನ್ ಗಿಲ್ ಅವರು ಶೂನ್ಯಕ್ಕೆ ಔಟಾದರು. ಆದ್ದರಿಂದ ತಂಡಕ್ಕೆ ಆರಂಭಿಕ ಹಿನ್ನಡೆ ಉಂಟಾಯಿತು. ಪವರ್ ಪ್ಲೇಯಲ್ಲಿ ಕೇವಲ 40 ರನ್ ಮಾತ್ರ ಒಟ್ಟುಗೂಡಿತು. ಗಿಲ್ ವಿಕೆಟ್ ಪತನದ ಬಳಿಕ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಬ್ಯಾಟಿಂಗ್ ಭಡ್ತಿ ಪಡೆದು ಆಡಲಿಳಿದರು. ವೃದ್ಧಿಮಾನ್ ಸಾಹಾ ಜತೆಗೂಡಿ ರಕ್ಷಣಾತ್ಮಕ ಆಡವಾಡುವ ಮೂಲಕ ತಂಡಕ್ಕೆ ಆಸರೆಯಾದರು.
ಮತ್ತೊಂದು ಬದಿಯಲ್ಲಿ ಸಾಹಾ ಅವರು ಎಸೆತವೊಂದರಂತೆ ರನ್ ಗಳಿಸುತ್ತಾ ಸಾಗಿ 47 ರನ್ ವೇಳೆ ಕೃಣಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಆರಂಭಿಕರಿಬ್ಬರ ವಿಕೆಟ್ ಕೃಣಾಲ್ ಪಾಲಾಯಿತು. ಆದರೆ ಬಳಿಕ ಆಡಲು ಬಂದ ಅಭಿನವ್ ಮನೋಹರ್ ಅವರು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು.5 ಎಸೆತಗಳಿಂದ ಕೇವಲ ಮೂರು ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ವಿಕೆಟ್ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಕೆಡವಿದರು.
ಅಭಿನವ್ ಮನೋಹರ್ ವಿಕೆಟ್ ಪತನದ ಬೆನ್ನಲ್ಲೇ ಡೇಜಂರಸ್ ಬ್ಯಾಟರ್ ವಿಜಯ್ ಶಂಕರ್ ವಿಕೆಟ್ ಕೂಡ ಬಿತ್ತು. ಅಫಘಾನಿಸ್ತಾನದ ಬೌಲರ್ ನವೀನ್ ಉಲ್ ಹಕ್ ಅವರು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆದ ಸಾಧನೆ ಮಾಡಿದರು. 94 ರನ್ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡ ಗುಜರಾತ್ ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ IPL 2023: ವಡಾ ಪಾವ್ ಎಂದರೆ ರಬಾಡಗೆ ಪಂಚ ಪ್ರಾಣ
ಲಕ್ನೋ ಬೌಲರ್ಗಳು ಈ ಪಂದ್ಯದಲ್ಲಿ ಉತ್ತಮ ಸಂಘಟಿತ ಬೌಲಿಂಗ್ ದಾಳಿ ನಡೆಸಿ ಗಮನಸೆಳೆದರು. ಇವರ ಈ ಬೌಲಿಂಗ್ ಮುಂದೆ ಗುಜರಾತ್ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. 17ನೇ ಓವರ್ ತನಕ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದ ಹಾರ್ದಿಕ್ ಪಾಂಡ್ಯ ಕೊಂಚ ಬಿರುಸಿನ ಆಟಕ್ಕೆ ಒತ್ತು ನೀಡಿದರು. ರವಿ ಬಿಷ್ಣೋಯಿ ಅವರ ಓವರ್ನಲ್ಲಿ ಒಂದು ಬೌಂಡರಿ ಮತ್ತು ಸತತ ಎರಡು ಸಿಕ್ಸರ್ ಬಾರಿಸಿದರು. ಇದೇ ವೇಳೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಈ ಓವರ್ನಲ್ಲಿ ಒಟ್ಟು 19 ರನ್ ಸೋರಿಕೆಯಾಯಿತು. ಜತೆಗೆ ಅವರು ಈ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದರು. ನಾಲ್ಕು ಓವರ್ಗೆ 49 ರನ್ ಬಿಟ್ಟುಕೊಟ್ಟು ವಿಕೆಟ್ಲೆಸ್ ಎನಿಸಿಕೊಂಡರು. ಗುಜರಾತ್ ತಂಡದ ಅರ್ಧದಷ್ಟು ಮೊತ್ತ ಬಿಷ್ಣೋಯಿ ಓವರ್ನಿಂದಲೇ ಹರಿದುಬಂತು.
ಡೇವಿಡ್ ಮಿಲ್ಲರ್ ಅವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕರೂ ಈ ಪಂದ್ಯದಲ್ಲಿ ಅವರು ರನ್ ಗಳಿಸುವಲ್ಲಿ ವಿಫಲರಾದರು. 12 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಅವರು 49 ಎಸೆತಗಳ ಮುಂದೆ 66 ರನ್ ಸಿಡಿಸಿದರು. ಇದರಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ಒಳಗೊಂಡಿತು. ಪಾಂಡ್ಯ ಅವರ ಸಮಯೋಚಿತ ಬ್ಯಾಟಿಂಗ್ನಿಂದಾಗಿ ತಂಡ ನೂರರ ಗಡಿದಾಟುವಲ್ಲಿ ಯಶಸ್ವಿಯಾಗಿತು. ಒಂದೊಮ್ಮೆ ಅವರು ಕೂಡ ಬೇಗನೆ ವಿಕೆಟ್ ಕೈ ಚೆಲ್ಲುತ್ತಿದ್ದರೆ ತಂಡದ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿರುತ್ತಿತ್ತು. ಲಕ್ನೋ ಪರ ಸ್ಟೋಯಿನಿಸ್ 2 ವಿಕೆಟ್ ಪಡೆದರು.