ಅಹಮದಾಬಾದ್: ಕೊರೊನಾ ಬಳಿಕ ಅದ್ಧೂರಿಯಾಗಿ ನಡೆಯಲಿರುವ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್(gujarat titans) ಮತ್ತು ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಉಭಯ ತಂಡಗಳ ಈ ಹೋರಾಟ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿ ಇದುವರೆಗೆ 7 ಐಪಿಎಲ್ ಪಂದ್ಯಗಳು ನಡೆದಿವೆ. ಇದರಲ್ಲಿ ಕೇವಲ 2 ಬಾರಿ ಮಾತ್ರ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯ ಸಾಧಿಸಿದೆ. 5 ಬಾರಿ ಚೇಸಿಂಗ್ ನಡೆಸಿದ ತಂಡ ಮೇಲುಗೈ ಸಾಧಿಸಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಇದೆ. ಆರ್ಸಿಬಿ ವಿರುದ್ಧ 2021ರಲ್ಲಿ ಪಂಜಾಬ್ ಕಿಂಗ್ಸ್ 179 ರನ್ ಬಾರಿಸಿದ್ದು ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ಅಹಮದಾಬಾದ್ನ ಟ್ಯಾಕ್ ಬೌಲಿಂಗ್ ಸ್ನೇಹಿಯಾಗಿದೆ.
ಸಂಭಾವ್ಯ ತಂಡ
ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ(ನಾಯಕ), ಶುಭಮನ್ ಗಿಲ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ, ಆರ್. ಸಾಯಿ ಕಿಶೋರ್, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಶಿವಂ ಮಾವಿ, ಮೊಹಮ್ಮದ್ ಶಮಿ.
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ(ನಾಯಕ), ದೀಪಕ್ ಚಹರ್, ಸಿಸಾಂಡ ಮಗಾಲ, ಸಿಮ್ರನ್ಜಿತ್ ಸಿಂಗ್, ಮಹೀಶ್ ತೀಕ್ಷಣ.
ತಾರೆಗಳ ರಂಗು
ಈ ಬಾರಿ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ತಾರೆಗಳ ಮನರಂಜನೆಯ ರಸದೌತಣ ಇರಲಿದೆ. ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಾಗುವ ತಾರೆಗಳ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಈಗಾಗಲೇ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೊವನ್ನು ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ತಮನ್ನಾ ಭಾಟಿಯಾ(Tamanna Bhatia), ಗಾಯಕರಾದ ಅರಿಜಿತ್ ಸಿಂಗ್(arijit singh) ಮೊದಲ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜತೆಗೆ ನಟಿ ರಶ್ಮಿಕಾ ಮಂದಣ್ಣ, ಟೈಗರ್ ಶ್ರಾಫ್ ಮತ್ತು ಕತ್ರಿನಾ ಕೈಫ್ ಕೂಡ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ನಡೆದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ, ಕೃತಿ ಸನೋನ್ ಹಾಗೂ ಖ್ಯಾತ ಗಾಯಕ ಎಪಿ ಧಿಲ್ಲೋನ್ ಅವರ ಸಮ್ಮುಖದಲ್ಲಿ ಮನರಂಜನೆ ಕಾರ್ಯಕ್ರಮದ ಮೂಲಕ ಈ ಟೂರ್ನಿಗೆ ಚಾಲನೆ ನೀಡಲಾಗಿತ್ತು. ಇದೀಗ ಪುರುಷರ ಐಪಿಎಲ್ಗೂ ಅದ್ಧೂರಿ ಚಾಲನೆ ನೀಡಲು ಬಿಸಿಸಿಐ ಎಲ್ಲ ಸಿದ್ಧತೆ ನಡೆಸಿದೆ.