ಮುಂಬಯಿ: ಟೀಮ್ ಇಂಡಿಯಾದ ಸೀಮಿತ ಓವರ್ಗಳ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರು ನಾಯಕನಾಗಬೇಕು ಎಂಬ ಕೂಗು ಮತ್ತೆ ಕೇಳಿಬಂದಿದೆ. ಭಾರತ ತಂಡದ ಮಾಜಿ ಕೋಚ್ ಮತ್ತು ಆಟಗಾರ ರವಿಶಾಸ್ತ್ರಿ ಅವರು ಮುಂದಿನ ವರ್ಷ ನಡೆಯುವ ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡವನ್ನು ಪಾಂಡ್ಯ ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕಾಮೆಂಟ್ರಿ ಮಾಡುತ್ತಿರುವ ರವಿಶಾಸ್ತ್ರಿ ಅವರು ಕ್ರಿಕೆಟ್ ಬಗೆಗಿ ಚರ್ಚೆಯೊಂದರಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. “2007ರ ಚೊಚ್ಚಲ ಟಿ20 ವಿಶ್ವಕಪ್ನಂತೆ ಈ ಬಾರಿಯೂ ಭಾರತ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಧೋನಿ ಅವರಿಗೆ ನಾಯಕತ್ವ ನೀಡಿದಂತೆ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದರೆ ಉತ್ತಮ” ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ರೋಹಿತ್ ಶರ್ಮಾ ಅವರು ಎಲ್ಲ ಮೂರು ಮಾದರಿಯ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಅವರು ಚುಟುಕು ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಲಯ ಕಳೆದುಕೊಂಡಿದ್ದಾರೆ. ಪಾಂಡ್ಯ ಅವರು ಈಗಾಗಲೇ ರೋಹಿತ್ ಅನುಪಸ್ಥಿತಿಯಲ್ಲಿ ಹಲವು ಸರಣಿಯನ್ನು ಗೆದ್ದಿದ್ದಾರೆ. ಜತೆಗೆ ಚೊಚ್ಚಲ ಪ್ರಯತ್ನದಲ್ಲೇ ಐಪಿಎಲ್ನಲ್ಲಿ ಗುಜರಾತ್ ತಂಡವನ್ನು ಚಾಂಪಿಯನ್ ಪಟ್ಟಕೇರಿಸಿದ್ದಾರೆ. ಈ ಆವೃತ್ತಿಯಲ್ಲಿಯೂ ಅವರ ನಾಯಕತ್ವದಲ್ಲಿ ತಂಡ ಸದ್ಯ ಅಗ್ರಸ್ಥಾನ ಸಂಪಾದಿಸಿದ್ದು, ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗೋಚರಿಸಿದೆ ಎಂದು ಶಾಸ್ತ್ರಿ ಹೇಳಿದರು.
ಇದನ್ನೂ ಓದಿ IPL 2023: ಲಕ್ನೋ,ಪಂಜಾಬ್ಗೆ ಗೆಲುವು; ಅಂಪಟ್ಟಿಯಲ್ಲಿ ಭಾರಿ ಬದಲಾವಣೆ
“ಐಪಿಎಲ್ನಲ್ಲಿ ಈಗಾಗಲೇ ಹಲವು ಯುವ ಬ್ಯಾಟರ್ಗಳು ಕಾಣಿಸಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ನೆಹಾಲ್ ವಧೇರಾ ಹೀಗೆ ಹಲವು ಯುವ ಬ್ಯಾಟರ್ಗಳು ಭಾರತ ತಂಡದಲ್ಲಿ ಆಡಲು ಅರ್ಹತೆ ಪಡೆಯಬಹುದು. ಆದರೆ ಹಾರ್ದಿಕ್ ತಂಡ ಮುನ್ನಡೆಸಿದರೆ ಉತ್ತಮ. ಹಾರ್ದಿಕ್ ಈಗಾಗಲೇ ಟಿ20 ಹಂಗಾಮಿ ನಾಯಕರಾಗಿದ್ದಾರೆ. ಆದ್ದರಿಂದ ಅವರೇ ನಾಯಕರಾಗಿ ಮುಂದುವರೆಯುತ್ತಾರೆ ಎಂದು ಭಾವಿಸುತ್ತೇನೆ. ಅವರ ನಿರ್ದೇಶನದಲ್ಲಿ ಹೊಸ ಮತ್ತು ಯುವ ಪ್ರತಿಭೆಗಳು ತಂಡವನ್ನು ಪ್ರತಿನಿಧಿಸುತ್ತಾರೆ. ಸಾಧ್ಯವಾದಷ್ಟೂ ಹೊಸ ತಂಡವನ್ನೇ ನಾವು ನಿರೀಕ್ಷಿಸಬಹುದು” ಎಂದು ಶಾಸ್ತ್ರಿ ಹೇಳಿದರು.