Site icon Vistara News

IPL 2023: ಬ್ಯಾಟಲ್‌ ಆಫ್ ಬ್ರದರ್ಸ್ ಚಾಲೆಂಜ್​ ಗೆದ್ದ ಹಾರ್ದಿಕ್​ ಪಾಂಡ್ಯ; ಪ್ಲೇ ಆಫ್​ ಸನಿಹಕ್ಕೆ ಗುಜರಾತ್​

Narendra Modi Stadium At Ahmedabad

ಅಹಮದಾಬಾದ್: “ಬ್ಯಾಟಲ್‌ ಆಫ್ ಬ್ರದರ್ಸ್​” ಎಂದೇ ಕರೆಯಲ್ಪಟ್ಟ ಭಾನುವಾರದ ಐಪಿಎಲ್​ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ 56 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಲಕ್ನೋ ವಿರುದ್ಧ ಗುಜರಾತ್​ ಅಜೇಯ ದಾಖಲೆಯನ್ನು ಉಳಿಸಿಕೊಂಡಿತು. ಉಭಯ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ ನಾಲ್ಕು ಬಾರಿ ಮುಖಾಮುಖಿಯಾಗಿದ್ದು ನಾಲ್ಕೂ ಪಂದ್ಯದಲ್ಲಿಯೂ ಹಾರ್ದಿಕ್ ಪಡೆ ಮೇಲುಗೈ ಸಾಧಿಸಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಐಪಿಎಲ್​ನ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್ ತಂಡ​ ಶುಭಮನ್​ ಗಿಲ್(ಅಜೇಯ 94) ಮತ್ತು ವೃದ್ಧಿಮಾನ್​ ಸಾಹಾ(81) ಅವರ ಸಿಡಿಲಬ್ಬರದ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 227 ರನ್​ ಬಾರಿಸಿತು. ಜವಾಬಿತ್ತ ಲಕ್ನೋ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸಿ ಶರಣಾಯಿತು. ಗುಜರಾತ್​ ಈ ಗೆಲುವಿನೊಂದಿಗೆ 16 ಅಂಕ ಸಂಪಾದಿಸಿ ಪ್ಲೇ ಆಫ್​​ ಸನಿಹಕ್ಕೆ ಬಂದು ನಿಂತಿದೆ.

ಬೃಹತ್​ ಮೊತ್ತವನ್ನು ದಿಟ್ಟ ರೀತಿಯಲ್ಲೇ ಬೆನ್ನಟ್ಟಿದ ಲಕ್ನೋ ಉತ್ತಮ ಆರಂಭ ಪಡೆಯಿತು. 16ನೇ ಆವೃತ್ತಿಯ ಐಪಿಎಲ್​ನಲ್ಲಿ ಮೊದಲ ಬಾರಿಗೆ ಆಡಲಿಳಿದ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್​ ಕ್ವಿಂಟನ್​ ಡಿ ಕಾಕ್​ ಮತ್ತು ಕೈಲ್ ಮೇಯರ್ಸ್​ ಗುಜರಾತ್​​ ಬೌಲರ್​ಗಳನ್ನು ಕಾಡಿದರು.

ಗುಜರಾತ್​ ಆರಂಭಿಕರಂತೆ ಈ ಜೋಡಿಯೂ ಉತ್ತಮ ಬ್ಯಾಟಿಂಗ್​ ನಡೆಸಿತು. 10ರ ಸರಾಸರಿಯಲ್ಲಿ ಬ್ಯಾಟ್​​ ಬೀಸಿ ಪವರ್​ ಪ್ಲೇಯಲ್ಲಿ 72 ರನ್​ ರಾಶಿ ಹಾಕಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸುತ್ತಿದ್ದ ಈ ಜೋಡಿಯನ್ನು ಮೋಹಿತ್​ ಶರ್ಮ ಬೇರ್ಪಡಿಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಕಷ್ಟದ ಕ್ಯಾಚ್​ ಒಂದನ್ನು ರಶಿದ್​ ಖಾನ್​ ಅವರು ಸೂಪರ್​ ಮ್ಯಾನ್​ ರೀತಿಯಲ್ಲಿ ಜಿಗಿದು ಹಿಡಿಯುವ ಮೂಲಕ ಈ ವಿಕೆಟ್​ ಉರುಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಮೇಯರ್ಸ್​ 48 ರನ್​ ಬಾರಿಸಿದರು.

ಮೇಯರ್ಸ್​ ವಿಕೆಟ್​ ಪತನದ ಬಳಿಕ ಲಕ್ನೋ ತಂಡದ ರನ್​ ಗಳಿಕೆಯ ವೇಗ ಕುಂಠಿತಗೊಂಡಿತು. ದೀಪಕ್​​ ಹೂಡಾ ಈ ಪಂದ್ಯದಲ್ಲಿಯೂ ಬ್ಯಾಟಿಂಗ್​ ವೈಫಲ್ಯ ಕಂಡರು. ಇದರೊಂದಿಗೆ ಹೂಡಾ ಆಡಿದ 11 ಪಂದ್ಯಗಳಲ್ಲಿಯೂ ತೀರಾ ಕಳಪೆ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಆ ಬಳಿಕ ಆಡಲಿಳಿದ ಮಾರ್ಕಸ್​ ಸ್ಟೋಯಿನಿಸ್​ ಕೂಡ 4 ರನ್​ಗೆ ಆಟ ಮುಗಿಸಿದರು. ಡಿ ಕಾಕ್​ ಅವರು ಏಕಾಂಗಿ ಹೋರಾಟ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರು. ಆದರೆ ಅವರಿಗೆ ಯಾರಿಂದಲೂ ಉತ್ತಮ ಸಾಥ್​ ಸಿಗಲೇ ಇಲ್ಲ. 70 ರನ್​ಗಳಿಸಿದ್ದ ವೇಳೆ ಅವರು ಕೂಡ ವಿಕೆಟ್​ ಕೈ ಚೆಲ್ಲಿದರು. ಇಲ್ಲಿಗೆ ಲಕ್ನೋ ತಂಡದ ಸೋಲು ಕೂಡ ಖಚಿತಗೊಂಡಿತು. ನಿಕೋಲಸ್​ ಪೂರನ್(3) ಕೂಡ ಅಗ್ಗಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಅಂತಿಮ ಹಂತದಲ್ಲಿ​ ಇಂಪ್ಯಾಕ್ಟ್​​ ಪ್ಲೇಯರ್​ ಆಗಿ ಕಣಕ್ಕಿಳಿದ ಆಯುಷ್‌ ಬದೋನಿ ಶಕ್ತಿ ಮೀರಿ ಪ್ರಯತ್ನಿಸಿದರೂ ಅವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಗುಜರಾತ್​ ಪರ ಮೋಹಿತ್​ ಶರ್ಮ ನಾಲ್ಕು ವಿಕೆಟ್​ ಕಿತ್ತು ಮಿಂಚಿದರು. ಬದೋನಿ 21 ರನ್​ ಗಳಿಸಿದರು. ನಾಯಕ ಕೃಣಾಲ್​ ಪಾಂಡ್ಯ ಗೋಲ್ಡನ್​ ಡಕ್​ ಸಂಕಟ್ಟಕ್ಕೆ ಸಿಲುಕಿದರು.

ಇದನ್ನೂ ಓದಿ IPL 2023 : ಟಾಸ್ ಗೆದ್ದ ರಾಜಸ್ಥಾನ್​ ತಂಡದಿಂದ ಬ್ಯಾಟಿಂಗ್​ ಆಯ್ಕೆ

ಸಾಹಾ, ಗಿಲ್​ ಬ್ಯಾಟಿಂಗ್​ ಅಬ್ಬರ

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಗುಜರಾತ್​ ಪರ ವೃದ್ಧಿಮಾನ್​ ಸಾಹಾ ಆರಂಭದಿಂದಲೇ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಲಕ್ನೋ ಬೌಲರ್​ಗಳ ಮೇಲೆರಗಿ ಸಿಕ್ಸರ್​ ಬೌಂಡರಿಗಳ ಸುರಿಮಳೆಯನ್ನಲೇ ಸುರಿಸಿದರು. ಇವರ ಈ ಬ್ಯಾಟಿಂಗ್​ ಪ್ರದರ್ಶನದಿಂದ ನಾಲ್ಕು ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತ 50ರ ಗಡಿ ದಾಟಿತು. ಇದರಲ್ಲಿ 46 ರನ್ ಸಾಹಾ ಅವರ ಬ್ಯಾಟ್​ನಿಂದಲೇ ಹರಿದು ಬಂತು. ಗಿಲ್​ ಅವರು ಕೇವಲ 5 ರನ್​ ಗಳಿಸಿದ್ದರು. ಪವರ್​ ಪ್ಲೇ ಮುಕ್ತಾಯಕ್ಕೆ ವಿಕೆಟ್​ ನಷ್ಟವಿಲ್ಲದೆ ಈ ಜೋಡಿ 78 ಒಟ್ಟುಗೋಡಿಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿತು. ಇದೇ ವೇಳೆ ವೃದ್ಧಿಮಾನ್​ ಸಾಹಾ 20 ಎಸೆಗಳಲ್ಲಿ ಅರ್ಧಶತಕವನ್ನೂ ಪೂರ್ತಿಗೊಳಿಸಿದರು.

ಪವರ್​ ಪ್ಲೇ ಬಳಿಕ ಶುಭಮನ್​ ಗಿಲ್​ ಕೂಡ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟರು. ಉಭಯ ಆಟಗಾರರು ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಪ್ರತಿ ಓವರ್​ಗೆ 12 ರನ್​ಗಳ ಸರಾಸರಿಯಲ್ಲಿ ರನ್​ ಒಟ್ಟುಗೂಡಿಸಿದರು. ಇವರ ಈ ಬ್ಯಾಟಿಂಗ್​ ಅಬ್ಬರದ ಮುಂದೆ ಲಕ್ನೋ ತಂಡದ ಬೌಲರ್​ಗಳು ದಿಕ್ಕಾಪಾಲಾದರು. 10 ಓವರ್​​ ಆಗುವ ಮೊದಲೇ ಗುಜರಾತ್ 120 ರನ್​ ಬಾರಿಸಿತು.

ಬಿರುಸಿನ ಬ್ಯಾಟಿಂಗ್​ ಮೂಲಕ ಮುನ್ನುಗ್ಗುತ್ತಿದ್ದ ವೃದ್ಧಿಮಾನ್​ ಸಾಹಾ ಅವರನ್ನು ಕೊನೆಗೂ ಆವೇಶ್​ ಖಾನ್​ ಔಟ್​ ಮಾಡುವಲ್ಲಿ ಯಶಸ್ವಿಯಾದರು. ಸಾಹಾ ಅವರು 43 ಎಸೆತಗಳಿಂದ 81 ರನ್​ ಬಾರಿಸಿದರು. ಈ ಮನಮೋಹಕ ಇನಿಂಗ್ಸ್​​ನಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಿತು. ಗಿಲ್​ ಮತ್ತು ಸಾಹಾ ಮೊದಲ ವಿಕೆಟ್​ಗೆ ಬರೋಬ್ಬರಿ 142 ರನ್​ಗಳ ಜತೆಯಾಟ ನಡೆಸಿದರು. ಇದು ಈ ಆವೃತ್ತಿಯಲ್ಲಿ ಮೊದಲ ವಿಕೆಟ್​ಗೆ ಒಟ್ಟುಗೂಡಿದ ದ್ವಿತೀಯ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ ಮುಂಬೈ ವಿರುದ್ಧ ಆರ್​ಸಿಬಿ ತಂಡದ ಆಟಗಾರರಾದ ಫಾಫ್​ ಡು ಪ್ಲೆಸಿಸ್​ ಮತ್ತು ವಿರಾಟ್​ ಕೊಹ್ಲಿ ಮೊದಲ ವಿಕೆಟ್​ಗೆ 148 ರನ್​ ಬಾರಿಸಿದ್ದರು.

ಅರ್ಧಶತಕ ಬಾರಿಸಿ ಮಿಂಚಿದ ಗಿಲ್​

ಆರಂಭದಲ್ಲಿ ನಿಧಾನ ಗತಿಯ ಬ್ಯಾಟಿಂಗ್​ ನಡೆಸಿದ್ದರೂ ಬಳಿಕ ಚುರುಕಿನ ಬ್ಯಾಟಿಂಗ್​ ನಡೆಸಿದ ಗಿಲ್​ 28 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ನಾಯಕ ಹಾರ್ದಿಕ್​ ಪಾಂಡ್ಯ ಉತ್ತಮ ಸಾಥ್​​ ನೀಡಿದರು. ಪಾಂಡ್ಯ 2 ಸಿಕ್ಸರ್​ ಮತ್ತು ಒಂದು ಬೌಂಡರಿ ಬಾರಿಸಿ 25 ರನ್​ ಗಳಿಸಿ ಅಣ್ಣ ಕೃಣಾಲ್​ಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. 20 ಓವರ್​ಗಳ ತನಕ ಬ್ಯಾಟಿಂಗ್​ ಕಾಯ್ದುಕೊಂಡ ಗಿಲ್​ 51 ಎಸೆತಗಳಲ್ಲಿ ಅಜೇಯ 94 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 7 ಸಿಕ್ಸರ್​ ಮತ್ತು 2 ಬೌಂಡರಿ ದಾಖಲಾಯಿತು. ಡೇವಿಡ್​ ಮಿಲ್ಲರ್​ 21 ರನ್​ ಗಳಿಸಿ ಅಜೇಯರಾಗಿ ಉಳಿದರು. ಲಕ್ನೋ ಪರ 8 ಮಂದಿ ಬೌಲಿಂಗ್​ ನಡೆಸಿದರೂ ಇವರಿಂದ ಕೀಳಲಾಗಿದ್ದು ಕೇವಲ 2 ವಿಕೆಟ್​ ಮಾತ್ರ.

ಸಂಕ್ಷಿಪ್ತ ಸ್ಕೋರ್​

ಗುಜರಾತ್​ ಟೈಟನ್ಸ್​: 20 ಓವರ್​ಗಳಲ್ಲಿ 2 ವಿಕೆಟ್​ಗೆ 227(ಶುಭಮನ್​ ಗಿಲ್ ಅಜೇಯ 94, ವೃದ್ಧಿಮಾನ್​ ಸಾಹಾ 81, ಹಾರ್ದಿಕ್​ ಪಾಂಡ್ಯ 25, ಡೇವಿಡ್​ ಮಿಲ್ಲರ್​ ಅಜೇಯ 21, ಆವೇಶ್​ ಖಾನ್​ 34ಕ್ಕೆ 1). ಲಕ್ನೋ ಸೂಪರ್​ ಜೈಂಟ್ಸ್​: 20 ಓವರ್​ಗಳಲ್ಲಿ7 ವಿಕೆಟ್​ಗೆ 171 (ಕ್ವಿಂಟನ್​ ಡಿ ಕಾಕ್ 70, ಕೈಲ್​ ಮೇಯರ್ಸ್​ 48, ಮೋಹಿತ್​ ಶರ್ಮ 29ಕ್ಕೆ 4)​.

Exit mobile version