ಅಹಮದಾಬಾದ್: ಕಳೆದ ಸಲದ ಫೈನಲಿಸ್ಟ್‌ಗಳಾದ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮಧ್ಯೆ ಇಂದು(ಭಾನುವಾರ) ರಾತ್ರಿ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಬಾರಿಯ ಆವೃತ್ತಿಯಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿ ಮುಖಾಮುಖಿಯಾಗುತ್ತಿವೆ. ಕಳೆದ ಫೈನಲ್ ಪಂದ್ಯದ ಸೋಲಿಗೆ ಸಂಜು ಪಡೆ ಈ ಪಂದ್ಯದಲ್ಲಿ ಸೇಡು ತಿರಿಸೀತೇ ಎಂಬುದು ಈ ಪಂದ್ಯದ ಕುತೂಹಲ
ರಾಜಸ್ಥಾನ್ ಸದ್ಯ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು 6 ಅಂಕದೊಂದಿಗೆ ಅಗ್ರ ಸ್ಥಾನ ಪಡೆದಿದೆ. ಗುಜರಾತ್ ಕೂಡ ಸಮಾನ ಅಂಕ ಪಡೆದಿದೆ. ಆದರೆ ಕಡಿಮೆ ರನ್ರೇಟ್ ಆಧಾರದಲ್ಲಿ ಪಾಂಡ್ಯ ಪಡೆ ಮೂರನೇ ಸ್ಥಾನದಲ್ಲಿದೆ. ಆದರೆ ಇಲ್ಲಿ ಯಾರೇ ಗೆದ್ದರೂ ಅಗ್ರಸ್ಥಾನಕ್ಕೇರಲಿದೆ. ಆ ತಂಡ ಯಾವುದು ಎಂದು ಇಂದು ರಾತ್ರಿ ಉತ್ತರ ಸಿಗಲಿದೆ.
ರಾಜಸ್ಥಾನ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಶಿಮ್ರಾನ್ ಹೆಟ್ಮೇರ್ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಆದರೆ ನಾಯಕ ಸಂಜು ಸ್ಯಾಮ್ಸನ್ ಅವರ ಹಠಾತ್ ಬ್ಯಾಟಿಂಗ್ ಕುಸಿತ ಕೊಂಚ ಹಿನ್ನಡೆಯಾಗಿದೆ. ಬೌಲಿಂಗ್ನಲ್ಲಿ ಅನುಭವಿಗಳಾದ ರವಿಚಂದ್ರನ್ ಅಶ್ವಿನ್, ಜಾಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ ಹಾಗೂ ಯುಜುವೇಂದ್ರ ಚಹಲ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮೂರೂ ಪಂದ್ಯಗಳಲ್ಲಿಯೂ ಗುಜರಾತ್ ಮೇಲುಗೈ ಸಾಧಿಸಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಗುಜರಾತ್ ನೆಚ್ಚಿನ ತಂಡವಾಗಿದೆ. ಪಾಂಡ್ಯ ಹೊರತುಪಡಿಸಿ ಉಳಿದ ಎಲ್ಲ ಆಟಗಾರರು ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಸಾಹಾ, ಗಿಲ್, ಸಾಯಿ ಸುದರ್ಶನ್, ಮಿಲ್ಲರ್, ತೆವಾಟಿಯಾ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಬೌಲಿಂಗ್ನಲ್ಲಿ ಶಮಿ, ಮೋಹಿತ್ ಶರ್ಮ, ಅಲ್ಜಾರಿ ಜೋಸೆಫ್, ರಶೀದ್ ಖಾನ್ ಕೂಡ ಘಾತಕವಾಗಿ ಪರಿಣಮಿಸಿಕೊಳ್ಳುವ ಸಾಧ್ಯತೆ ಇದೆ.
ಸಂಭಾವ್ಯ ತಂಡ
ಗುಜರಾತ್ ಟೈಟನ್ಸ್: ವೃದ್ದಿಮಾನ್ ಸಾಹ, ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಜೋಶ್ವಾ ಲಿಟ್ಲ್, ಅಲ್ಜಾರಿ ಜೋಸೆಫ್, ಮೋಹಿತ್ ಶರ್ಮಾ, ಮೊಹಮ್ಮದ್ ಶಮಿ.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ಶಿಮ್ರಾನ್ ಹೆಟ್ಮೈರ್, ರಿಯಾನ್ ಪರಾಗ್, ಧೃವ್ ಜುರೆಲ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜುವೇಂದ್ರ ಚಹಲ್.