ಧರ್ಮಶಾಲಾ: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಹಾಲಿ ಚಾಂಪಿಯನ್ ಗುಜರಾತ್ ತಂಡ ಮಾತ್ರ ಪ್ಲೇ ಆಫ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಉಳಿದ ಮೂರು ಸ್ಥಾನಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಯಾವ ತಂಡಗಳಿಗೆ ಪ್ಲೇ ಆಫ್ ಅವಕಾಶವಿದೆ ಎಂಬ ಮಾಹಿತಿ ಇಂತಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ರಾಜಸ್ಥಾನ್ ರಾಯಲ್ಸ್ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿದೆ. ಸದ್ಯ 14 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ರಾಜಸ್ಥಾನ್ಗೆ ಇನ್ನು ಯಾವುದೇ ಪಂದ್ಯ ಉಳಿದಿಲ್ಲ. ಹೀಗಾಗಿ ಈ ತಂಡದ ಭವಿಷ್ಯ ಮುಂಬೈ ಮತ್ತು ಆರ್ಸಿಬಿ ತಂಡಗಳ ಫಲಿತಾಂಶಗಳ ಮೇಲೆ ನಿರ್ಧರಿತವಾಗಲಿದೆ. ಒಂದೊಮ್ಮೆ ಮುಂಬೈ ಮತ್ತು ಆರ್ಸಿಬಿ ಸೋತರೆ ಈ ಮೂರು ತಂಡಗಳ ಅಂಕ 14 ಸಮನಾಗುತ್ತದೆ. ಆಗ ರನ್ ರೇಟ್ ಆಧಾರದಲ್ಲಿ ಮುಂದಿರುವ ತಂಡಕ್ಕೆ ಪ್ಲೇ ಆಫ್ ಟಿಕೆಟ್ ಸಿಗಲಿದೆ. ಮುಂಬೈ ಈ ಅವಕಾಶದಿಂದ ವಂಚಿತವಾಗಬಹುದು. ಏಕೆಂದರೆ ರನ್ರೇಟ್ ಕಳಪೆಯಾಗಿದೆ.
ಆರ್ಸಿಬಿ ದೊಡ್ಡ ಅಂತರದಿಂದ ಸೋತರೆ ಮಾತ್ರ ಆಗ ರಾಜಸ್ಥಾನ್ಗೆ ರನ್ ರೇಟ್ ಲೆಕ್ಕಾಚಾರ ಕೈಹಿಡಿಯಬಹುದು. ಒಂದೊಮ್ಮೆ ಆರ್ಸಿಬಿ ಸಣ್ಣ ಅಂತರದಿಂದ ಸೋಲು ಕಂಡರೆ ಆರ್ಸಿಬಿಗೆ ಪ್ಲೇ ಆಫ್ಗೇರುವ ಅವಕಾಶವಿದೆ. ಏಕೆಂದರೆ ರಾಜಸ್ಥಾನ್ ತಂಡಕ್ಕಿಂತ ಆರ್ಸಿಬಿ ತಂಡದ ರನ್ರೇಟ್ ಉತ್ತಮವಾಗಿದೆ. ಹೀಗಾಗಿ ಸೋತರೂ ಆರ್ಸಿಬಿಗೆ ದೊಡ್ಡ ಮಟ್ಟದಲ್ಲಿ ರನ್ರೇಟ್ ಕುಸಿತ ಕಾಣುವುದು ಅಸಾಧ್ಯ. ಆದ್ದರಿಂದ ಆರ್ಸಿಬಿ ದೊಡ್ಡ ಅಂತರದಿಂದ ಸೋತರೇ ಮಾತ್ರ ರಾಜಸ್ಥಾನ್ಗೆ ಅವಕಾಶ ಸಿಗಲಿದೆ.
ಕೆಕೆಆರ್ ತಂಡಕ್ಕೂ ಪ್ಲೇ ಆಫ್ಗೇರುವ ಅವಕಾಶವಿದೆ. ಆದರೆ ಇದಕ್ಕೆ ಪವಾಡವೊಂದು ಸೃಷ್ಟಿಯಾಗಬೇಕಿದೆ. ಕಾರಣ ತನಗಿಂತ ಮೇಲಿರುವ ನಾಲ್ಕು ತಂಡಗಳು ಸೋಲು ಕಾಣಬೇಕಿದೆ. ಜತೆಗೆ ದೊಡ್ಡ ಅಂತರದ ಗೆಲುವು ಕೂಡ ಅಗತ್ಯ. ಏಕೆಂದರೆ ತಂಡದ ರನ್ರೇಟ್ ಮೈನಸ್ನಲ್ಲಿದೆ. ಮೇಲ್ನೋಟಕ್ಕೆ ಕೆಕೆಆರ್ಗೆ ಅವಕಾಶ ಕಷ್ಟಸಾಧ್ಯ. ಇಂದು(ಶನಿವಾರ) ನಡೆಯುವ ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಭವಿಷ್ಯ ಅಡಗಿದೆ. ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ಇದನ್ನೂ ಓದಿ IPL 2023: ಶೂನ್ಯ ಸುತ್ತಿ ದಾಖಲೆ ಬರೆದ ಬಟ್ಲರ್
ಚೆನ್ನೈ-ಲಕ್ನೋ ಸೋತರೆ ಯಾರಿಗೆ ಲಾಭ
ಚೆನ್ನೈ ಮತ್ತು ಲಕ್ನೋ ತಂಡಗಳು 15 ಅಂಕ ಸಂಪಾದಿಸಿ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿದೆ. ಶನಿವಾರ ನಡೆಯುವ ಡಬಲ್ ಹೆಡರ್ ಪಂದ್ಯದಲ್ಲಿ ಉಭಯ ತಂಡಗಳು ಗೆಲುವು ಸಾಧಿಸಿದರೆ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಒಂದೊಮ್ಮೆ ಸೋತರೆ ಆರ್ಸಿಬಿ ಮತ್ತು ಮುಂಬೈ ತಂಡಗಳ ಫಲಿತಾಂಶದ ವರಗೆ ಕಾಯಬೇಕಾಗಿದೆ. ಚೆನ್ನೈ ಮತ್ತು ಲಕ್ನೋ ಸೋಲು ಕಂಡರೆ, ಮುಂಬೈ ಮತ್ತು ಆರ್ಸಿಬಿ ಗೆದ್ದರೆ ಆಗ ಇತ್ತಂಡಗಳಲ್ಲಿ ಒಂದು ತಂಡ ಟೂರ್ನಿಯಿಂದ ಹೊರಬೀಳಲಿದೆ. ಮುಂಬೈ ಮತ್ತು ಆರ್ಸಿಬಿಗೆ 16 ಅಂಕಗಳಾಗುತ್ತದೆ. ಚೆನ್ನೈ ಮತ್ತು ಲಕ್ನೋ 15 ಅಂಕಗಳಿಂದ ಹಿಂದೆ ಬೀಳಲಿದೆ. ಅಂತಿಮ ತಂಡವಾಗಿ ಒಂದು ತಂಡಕ್ಕೆ ಪ್ಲೇ ಆಫ್ಗೇರುವ ಅವಕಾಶವಿದ್ದರೂ ರನ್ರೇಟ್ನಲ್ಲಿ ಯಾವ ತಂಡ ಮುಂದಿದೆಯೋ ಆ ತಂಡಕ್ಕೆ ಅದೃಷ್ಟ ಒಲಿಯಲಿದೆ. ಒಟ್ಟಾರೆ ಅಂತಿಮ ಪಂದ್ಯದವರೆಗೂ ಕುತೂಹಲವಂತೂ ಇದ್ದೇ ಇದೆ.