ಮುಂಬಯಿ: ಶನಿವಾರ ರಾತ್ರಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 13 ರನ್ ಗಳಿಂದ ಜಯಭೇರಿ ಬಾರಿಸಿದೆ. ಪಂಜಾಬ್ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಅರ್ಶ್ದೀಪ್ ಸಿಂಗ್ 4 ವಿಕೆಟ್ ಕಿತ್ತು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇದೇ ಪಂದ್ಯದಲ್ಲಿ ಅವರು ಎರಡು ಸ್ಟಂಪ್ಗಳನ್ನು ಮುರಿದು ಇದೀಗ ಭಾರಿ ಸುದ್ದಿಯಾಗಿದ್ದಾರೆ. ಅವರು ಈ 2 ವಿಕೆಟ್ ಮುರಿದುದರಿಂದ ಐಪಿಎಲ್ ಮಂಡಳಿಗೆ 24 ಲಕ್ಷ ರೂ ನಷ್ಟವಾಗಿದೆ.
ದೊಡ್ಡ ಮೊತ್ತವನ್ನು ಬೆನ್ನಟ್ಟಿ ಬಂದ ಮುಂಬೈ ತಂಡಕ್ಕೆ ಗೆಲುವಿಗೆ ಅಂತಿಮ ಓವರ್ನಲ್ಲಿ 16 ರನ್ ಅಗತ್ಯವಿತ್ತು. ಈ ವೇಳೆ ಓವರ್ ಎಸೆಯಲು ಬಂದ ಅರ್ಶ್ದೀಪ್ ಮೊದಲ ಎಸೆತದಲ್ಲಿ ಒಂದು ರನ್ ನೀಡಿದರು. ಮುಂದಿನದ್ದು ಡಾಟ್ ಬಾಲ್. 4 ಎಸೆತದಲ್ಲಿ 15 ಸವಾಲು. ಮೂರನೇ ಎಸೆತದಲ್ಲಿ ತಿಲಕ್ ವರ್ಮಾ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮಧ್ಯದ ಸ್ಟಂಪ್ ಎರಡು ತುಂಡಾಯಿತು. ಮತ್ತೆ ಹೊಸತೊಂದು ಸ್ಟಂಪ್ ತಂದು ಆಡಬೇಕಾಯಿತು. ಆದರೆ ಮುಂದಿನ ಎಸೆತದಲ್ಲಿಯೂ ಮತ್ತೆ ಮಿಡಲ್ ಸ್ಟಂಪ್ ತುಂಡು. ನೆಹಾಲ್ ವದೇರಾ ಬೌಲ್ಡ್. ಒಂದು ಕ್ಷಣ ಸ್ಟೇಡಿಯಂನಲ್ಲಿ ನೆರದಿದ್ದ ಎಲ್ಲ ಪ್ರೇಕ್ಷಕರು ಕೂಡ ಈ ಬೆಂಕಿ ಬೌಲಿಂಗ್ ಕಂಡು ನಿಬ್ಬೆರಗಾದರು. ಇನ್ನೂ ಒಂದು ಎಸೆತ ಬಾಕಿ ಇತ್ತು ಈ ಎಸೆತದಲ್ಲಿಯೂ ಅವರು ಸ್ಟಂಪ್ ಮುರಿಯುತ್ತಾರೆ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ ಈ ಎಸೆತದಲ್ಲಿ ಆರ್ಚರ್ ಒಂದು ರನ್ ತೆಗೆದರು. ಪಂಜಾಬ್ 13 ರನ್ ಗಳಿಂದ ಗೆದ್ದು ಬೀಗಿತು.
ಇದನ್ನೂ ಓದಿ IPL 2023: ಮುಂಬಯಿ ವಿರುದ್ಧ ಸಿಂಗ್ ಈಸ್ ಕಿಂಗ್
ಅರ್ಶ್ದೀಪ್ ಸಿಂಗ್ ಮುರಿದಿರುವ ಈ ಸ್ಟಂಪ್ ಬೆಲೆ ಸುಮಾರು 24 ಲಕ್ಷ ರೂ. ಎಂದು ತಿಳಿದುಬಂದಿದೆ. ಇನ್ನು ಅರ್ಶ್ದೀಪ್ ಸಿಂಗ್ ಅವರ ಈ ಪ್ರದರ್ಶನಕ್ಕೆ ಮುಂಬಯಿ ಪೊಲೀಸ್ ಅಧಿಕಾರಿಯೊಬ್ಬರು ಹಾಸ್ಯಮಯ ಟ್ವೀಟ್ ಮಾಡಿದ್ದಾರೆ. ಅರ್ಶ್ದೀಪ್ ಅವರ ಲಾಟಿ ಚಾರ್ಜ್ಗೆ ಮುಂಬೈ ನಗರವೇ ಬೆಚ್ಚಿ ಬಿದ್ದಿದೆ ಎಂದು ಹೇಳಿದ್ದಾರೆ. ವಿಶೇಷ ಎಂದರೆ ಪಂದ್ಯ ಮುಗಿದ ಬಳಿಕ ಈ ಸ್ಟಂಪ್ಗಳನ್ನು ಅರ್ಶ್ದೀಪ್ ಸಿಂಗ್ಗೆ ಸ್ಮರಣಿಕೆಯಾಗಿ ನೀಡಲಾಯಿತು.
ಪಂಜಾಬ್ಗೆ ರೋಚಕ ಗೆಲುವು
ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 31ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಮತ್ತು ಕ್ಯಾಮರೂನ್ ಗ್ರೀನ್ ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.